ಗುಜರಾತ್: ಕಳೆದ 3 ವರ್ಷಗಳಲ್ಲಿ 40 ಸಾವಿರಕ್ಕೂ ಅಧಿಕ ಮಕ್ಕಳಲ್ಲಿ ಅಪೌಷ್ಟಿಕತೆ; ಲೋಕಸಭೆಗೆ ಕೇಂದ್ರದ ಮಾಹಿತಿ
ಅಹ್ಮದಾಬಾದ್: ಗುಜರಾತ್ ನಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯ ನಡುವೆ ಮಕ್ಕಳ ಸಾವಿನ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ ಹಾಗೂ ತಾಯಂದಿರ ಆರೋಗ್ಯದ ಮೇಲೂ ಹಾನಿಯಾಗಿರುವುದು ಕೇಂದ್ರ ಸರಕಾರವು ಲೋಕಸಭೆಯಲ್ಲಿ ಒದಗಿಸಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ.
ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ದೇಶದಲ್ಲೇ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಈ ಸಂಖ್ಯೆಯು ಕಳೆದ ಮೂರು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಿರುವುದು ಬೆಳಕಿಗೆ ಬಂದಿದೆ.
ಗುಜರಾತ್ ನಲ್ಲಿ ಐದು ವರ್ಷಕ್ಕಿಂತ ಕೆಳವಯಸ್ಸಿನ ಸಾವಿರಾರು ಮಕ್ಕಳು ತೀವ್ರಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 41,632 ಕ್ಕೂ ಅಧಿಕ ಮಂದಿಯನ್ನುಪೌಷ್ಟಿಕತೆ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸದನಕ್ಕೆ ತಿಳಿಸಿದೆ.
ಲೋಕಸಭೆಯಲ್ಲಿ ಸಂಸದರಾದ ಎಂ. ಧನುಷ್ ಕುಮಾರ್ ಹಾಗೂ ಸೆಲ್ವಂ ಜಿ. ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವಾಲಯವು 2021-22ರ ಸಾಲಿನಲ್ಲಿ ದೇಶಾದ್ಯಂತದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಐದು ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳ ಸಂಖ್ಯೆ 1.04 ಲಕ್ಷ ಆಗಿದೆಯೆಂದು ತಿಳಿಸಿದೆ.
ಈ ಪೈಕಿ ಗುಜರಾತ್ ರಾಜ್ಯವೊಂದರಲ್ಲಿಯೇ 2020-21ನೇ ಸಾಲಿನಲ್ಲಿ 9606, 2021-22ರಲ್ಲಿ 13,048 ಹಾಗೂ 2022-23ರಲ್ಲಿ 18,978 ಪ್ರಕರಣಗಳು ವರದಿಯಾಗಿವೆ.
ಗುಜರಾತ್ ನಲ್ಲಿ 2023ರ ಜೂನ್ ವರೆಗೆ 5694 ಮಂದಿ ಮಕ್ಕಳನ್ನು ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲಾಗಿದ್ದು, ಇದು ಆ ರಾಜ್ಯದಲ್ಲಿ ಅಪೌಷ್ಟಿಕತೆಯ ಸಮಸ್ಯೆ ಹದಗೆಡುತ್ತಿರುವುದಕ್ಕೆ ಸ್ಪಷ್ಟ ನಿದರ್ಶನವೆಂಬುದನ್ನು ಈ ಅಂಕಿ ಅಂಶಗಳನ್ನು ಬೆಟ್ಟು ತೋರಿಸಿವೆಯೆಂದು ಆಂಗ್ಲ ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್ ವಕ್ತಾರ ಹಿರೇನ್ ಬಾಂಕರ್ ಅವರು ಪ್ರತಿಕ್ರಿಯಿಸುತ್ತಾ, ‘‘ ಗುಜರಾತ್ ನಲ್ಲಿ ಪ್ರತಿ ವರ್ಷ ಸರಾಸರಿ 12 ಲಕ್ಷ ಮಕ್ಕಳು ಜನಿಸುತ್ತಾರೆ. ಅವರಲ್ಲಿ 30 ಸಾವಿರ ಮಂದಿ ಸಾಯುತ್ತಾರೆ. ಇದು ವಾಸ್ತವ. ಕೇಂದ್ರ ಸರಕಾರದ ಅಂಕಿಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಗುಜರಾತ್ ನಲ್ಲಿ 7,15,515 ಮಂದಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’’ ಎಂದು ಹೇಳಿದ್ದಾರೆ.
ಬಿಜೆಪಿ ಆಳ್ವಿಕೆಯಲ್ಲಿ ಐದು ವರ್ಷಕ್ಕಿಂತ ಕೆಳವಯಸ್ಸಿನ ಈ ಮಕ್ಕಳು ತಾಯಿಯ ಮಡಿಲಲ್ಲಿ ಬೆಳೆಯುವ ಬದಲು ಪೌಷ್ಟಿಕತೆ ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುತ್ತಿದ್ದಾರೆ. ಗುಜರಾತ್ ಗೆ ಇದೊಂದು ಕಳವಳಕಾರಿಯಾದ ಸಂಗತಿ ’’ ಎಂದು ಹಿರೇನ್ ಹೇಳಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಗುಜರಾತ್ ನ ಶೇ.39ರಷ್ಟು ಮಕ್ಕಳು ತಮ್ಮ ಕಡಿಮೆ ದೇಹತೂಕವನ್ನು ಹೊಂದಿದ್ದಾರೆ.