ಗುಜರಾತ್: ಎರಡು ವರ್ಷಗಳಾದರೂ ಉದ್ಯೋಗಕ್ಕಾಗಿ ಕಾಯುತ್ತಿರುವ ಮೂರು ಲಕ್ಷ ಅರ್ಹ ಶಿಕ್ಷಕರು
ಅಹ್ಮದಾಬಾದ್: ಗುಜರಾತಿನಲ್ಲಿ ಶಿಕ್ಷಕ ಅರ್ಹತಾ ಪರೀಕ್ಷೆ (ಟಿಇಟಿ) ಯಲ್ಲಿ 2.75 ಲಕ್ಷ ಮತ್ತು ಶಿಕ್ಷಕ ಯೋಗ್ಯತಾ ಪರೀಕ್ಷೆ (ಟಿಎಟಿ)ಯಲ್ಲಿ 1.18 ಲಕ್ಷ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರಾದರೂ ನಿರುದ್ಯೋಗಿಗಳಾಗಿಯೇ ಉಳಿದುಕೊಂಡಿದ್ದಾರೆ. ಬೋಧಕ ಹುದ್ದೆಗಳಿಗೆ ನೇಮಕಗೊಳ್ಳಲು ಈ ಪರೀಕ್ಷೆಗಳು ಅಗತ್ಯವಾಗಿವೆ.
ಕಳೆದ ಎರಡು ವರ್ಷಗಳಲ್ಲಿ 3.94 ಲಕ್ಷ ಅಭ್ಯರ್ಥಿಗಳ ಪೈಕಿ ಟಿಇಟಿ ಮತ್ತು ಟಿಎಟಿ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡ 3.88 ಲಕ್ಷ ಅಭ್ಯರ್ಥಿಗಳು ಪ್ರಸ್ತುತ ನಿರುದ್ಯೋಗಿಗಳಾಗಿದ್ದಾರೆ. ಕೇವಲ 5,678 ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕಗೊಂಡಿದ್ದಾರೆ ಎಂದು ಗುಜರಾತ್ ಸರಕಾರವು ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಕಿರೀಟ ಸೋಮೈಯಾ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸರಕಾರವು ಈ ಮಾಹಿತಿಯನ್ನು ನೀಡಿದೆ. ಶಿಕ್ಷಕರ ನೇಮಕಾತಿಗಾಗಿ ವೇಳಾಪಟ್ಟಿಯನ್ನು ಹಾಕಿಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಸರಕಾರವು, ಅಗತ್ಯಕ್ಕನುಗುಣವಾಗಿ ನೇಮಕಾತಿಗಳನ್ನು ಮಾಡಿಕೊಳ್ಳಲಾಗುವುದು ಎಂದು ಉತ್ತರಿಸಿದೆ.
ಮಾರ್ಚ್ 2023ಕ್ಕೆ ಇದ್ದಂತೆ 4,146 ಸರಕಾರಿ ಮತ್ತು ಅನುದಾನಿತ ಉನ್ನತ ಮಾಧ್ಯಮಿಕ ಶಾಲೆಗಳಲ್ಲಿ 5,940 ಬೋಧಕ ಹುದ್ದೆಗಳು ಖಾಲಿಯಿದ್ದವು. ಇದೇ ರೀತಿ ಸರಕಾರಿ ಮತ್ತು ಅನುದಾನಿತ ಮಾಧ್ಯಮಿಕ ಶಾಲೆಗಳಲ್ಲಿ 3,260 ಬೋಧಕ ಹುದ್ದೆಗಳು ಖಾಲಿಯಿದ್ದವು ಎಂದು ಶಿಕ್ಷಣ ಸಚಿವ ಕುಬೇರ ದಿಂಡೋರ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಶಾಲೆಗಳಲ್ಲಿ ಟಿಇಟಿ ಮತ್ತು ಟಿಎಟಿ ತೇರ್ಗಡೆ ಹೊಂದಿರುವವರ ನೇಮಕಾತಿಗಾಗಿ ಗುಜರಾತಿನಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿರುತ್ತವೆ.