ಗುಜರಾತ್: ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ವಿಷಾನಿಲ ಸೋರಿಕೆಯಿಂದ ಉಸಿರುಗಟ್ಟಿ 3 ಕಾರ್ಮಿಕರು ಸಾವು
ಅಹ್ಮದಾಬಾದ್: ಗುಜರಾತ್‌ನ ಸುರೇಂದ್ರನಗರ್ ಜಿಲ್ಲೆಯ ತಂಗಧ್ ತಾಲೂಕಿನ ಭೇಟ್ ಗ್ರಾಮದ ಸಮೀಪ ಇರುವ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ಘಟನೆ ಕಳೆದ ಶನಿವಾರ ನಡೆದಿದೆ.
ಈ 100 ಅಡಿ ಆಳದ ಗಣಿಯಲ್ಲಿ ವಿಷಾನಿಲ ಸೋರಿಕೆಯ ನಂತರ ಈ ದುರಂತ ನಡೆದಿದೆ. ಮೃತರನ್ನು ಲಕ್ಷ್ಮಣ್ ಕೋಲಿ, ವಿರಾಮ್ ಕೋಲಿ ಮತ್ತು ಖೋಡಾ ಕೋಲಿ ಎಂದು ಗುರುತಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಲಕ್ಷ್ಮಣ್ ಕೋಲಿ ಎಂಬಾತನ ತಂದೆ ಸಾವ್ಸಿ ಕೋಲಿ ದೂರು ದಾಖಲಿಸಿದ್ದಾರೆ. ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಪರಿಕರಗಳನ್ನು ಒದಗಿಸಲಾಗಿಲ್ಲ ಎಂದು ದೂರಿ ಜಸಾ ಕೇರಳಿಯಾ, ಜನಕ್ ಅನಿಯರಿಯಾ, ಖಿಮ್ಜಿ ಸರ್ದಿಯಾ ಮತ್ತು ಕಲ್ಪೇಶ್ ಪರ್ಮಾರ್ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ.
ಆರೋಪಿಗಳ ಪೈಕಿ ಪರ್ಮಾರ್ ಬಿಜೆಪಿ ಸದಸ್ಯ ಹಾಗೂ ತಾಲೂಕು ಪಂಚಾಯತ್ ಸದಸ್ಯನಾಗಿದ್ದು ಆತನ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.
ಮೃತರು ಈ ಗಣಿಯಲ್ಲಿ ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದರು. ಈ ಗಣಿಯನ್ನು ಸರ್ಕಾರ ಮುಚ್ಚಿದ್ದರೂ ಆರೋಪಿಗಳು ಅದರಲ್ಲಿ ಕಾರ್ಯಾಚರಿಸಿ ಕಲ್ಲಿದ್ದಲು ಮಾರಾಟ ಮಾಡುತ್ತಿದ್ದರೆಂದು ಆರೋಪಿಸಲಾಗಿದೆ.