ಗುಜರಾತ್: ತರಬೇತು ವಿಮಾನ ಪತನ; ಓರ್ವ ಪೈಲಟ್ ಮೃತ್ಯು, ಇಬ್ಬರಿಗೆ ಗಾಯ

PC : ANI
ಹೊಸದಿಲ್ಲಿ: ಖಾಸಗಿ ಪೈಲಟ್ ತರಬೇತಿ ಕೇಂದ್ರಕ್ಕೆ ಸೇರಿದ ವಿಮಾನವೊಂದು ಗುಜರಾತ್ ನ ಅಮ್ರೇಲಿಯಲ್ಲಿ ಮಂಗಳವಾರ ಪತನಗೊಂಡಿದ್ದು, ತರಬೇತು ಪಡೆಯುತ್ತಿದ್ದ ಓರ್ವ ಪೈಲಟ್ ಮೃತಪಟ್ಟಿದ್ದಾರೆ.
ಇತರ ಇಬ್ಬರು ಪೈಲಟ್‌ಗಳನ್ನು ಸುಟ್ಟ ಗಾಯಗಳ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ 20 ವರ್ಷದ ಪೈಲಟ್ ಮಹಾರಾಷ್ಟ್ರದ ನಿವಾಸಿ ಎಂದು ಮೂಲಗಳು ತಿಳಿಸಿವೆ.
ವಿಮಾನ ಹಾರಾಟದ ಮಧ್ಯೆ ಗಿರಿಯಾ ರಸ್ತೆಯಲ್ಲಿರುವ ಮರವೊಂದಕ್ಕೆ ಢಿಕ್ಕಿಯಾಗಿ ಪತನಗೊಂಡಿದ್ದು, ಸುತ್ತಮತ್ತಲಿನ ಪ್ರದೇಶಗಳಲ್ಲಿ ಭೀತಿ ಮೂಡಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ದಳ ಹಾಗೂ ಪೊಲೀಸರನ್ನು ಒಳಗೊಂಡ ತುರ್ತು ತಂಡಗಳು ಘಟನಾ ಸ್ಥಳಕ್ಕೆ ತಲುಪಿದವು ಹಾಗೂ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು ಎಂದು ಅವರು ಹೇಳಿದ್ದಾರೆ.
‘‘ಅಮ್ರೇಲಿ ಪೊಲೀಸ್ ಠಾಣಾ ಪ್ರದೇಶದಲ್ಲಿರುವ ಲೆಜೆಂಡರಿ ಪ್ಲೆಯಿಂಗ್ ಇನ್‌ಸ್ಟಿಟ್ಯೂಟ್ ವಿಮಾನ ಹಾರಾಟ ತರಬೇತಿ ನೀಡುತ್ತದೆ. ತರಬೇತಿ ವೇಳೆ ಈ ಸಂಸ್ಥೆಯ ವಿಮಾನ ಪತನಗೊಂಡಿದೆ. ಇದರಿಂದ ತರಬೇತು ಪಡೆಯುತ್ತಿದ್ದ ಓರ್ವ ಪೈಲಟ್ ಮೃತಪಟ್ಟಿದ್ದಾನೆ ಎಂಬದು ನಮ್ಮ ತನಿಖೆಯಿಂದ ಬಹಿರಂಗಗೊಂಡಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದೆ’’ ಎಂದು ಅಮ್ರೇಲಿ ಎಸ್.ಪಿ. ಸಂಜಯ್ ಖರಾಟ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
‘‘ಇದು ಏಕಾಂಗಿ ಹಾರಾಟಕ್ಕೆ ಅನುಮತಿ ಪಡೆದ ತರಬೇತು ವಿಮಾನವಾಗಿತ್ತು. ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಹಾನಿ ಉಂಟಾಗಿಲ್ಲ. ವಿಮಾನ ಮರವೊಂದರಲ್ಲಿ ಸಿಲುಕಿಕೊಂಡಿತು ಹಾಗೂ ಬೆಂಕಿ ಹತ್ತಿಕೊಂಡಿತು. ನಾವು ಈ ಬಗ್ಗೆ ನಾವು ಮಾಹಿತಿ ಸ್ವೀಕರಿಸಿದ್ದು, ಡಿಜಿಸಿಎಗೆ ಮಾಹಿತಿ ನೀಡಿದ್ದೇವೆ. ಅವರು ತನಿಖೆ ನಡೆಸಲಿದ್ದಾರೆ’’ ಎಂದು ಅಮ್ರೇಲಿ ಜಿಲ್ಲಾಧಿಕಾರಿ ಅಜಯ್ ದಹಿಯಾ ಸ್ಥಳೀಯ ಮಾದ್ಯಮಕ್ಕೆ ತಿಳಿಸಿದ್ದಾರೆ.