ನಾಲ್ಕು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕನ ಅಪಹರಿಸಿ ಹತ್ಯೆ; ಪ್ರಿಯತಮನ ಜೊತೆಗೂಡಿ ನವವಧುವಿನಿಂದಲೇ ಕೊಲೆ ಸಂಚು
ಸೂರತ್: ನಾಲ್ಕು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕನೊಬ್ಬನನ್ನು ಅಪಹರಿಸಿ ಹತ್ಯೆಗೈದ ಘಟನೆ ಗುಜರಾತ್‌ನ ಗಾಂದಿ ನಗರದಲ್ಲಿ ವರದಿಯಾಗಿದೆ. ಆತನನ್ನು ನವವಧುವೇ ತನ್ನ ಪ್ರಿಯತಮನಾದ ಸೋದರಸಂಬಂಧಿಯ ಜೊತೆ ಸೇರಿ ಕೊಲೆ ಮಾಡಿದ್ದಾಳೆಂದು ಪೊಲೀಸರು ಆಪಾದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಪಾಯಲ್, ಆಕೆಯ ಪ್ರಿಯಕರ ಕಲ್ಪೇಶ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಕೊಲೆಯಾದ ಯುವಕನನ್ನು ಅಹ್ಮದಾಬಾದ್ ನಿವಾಸಿ ಭವಿಕ್ ಎಂದು ಗುರುತಿಸಲಾಗಿದೆ. ಆತನಿಗೆ ನಾಲ್ಕು ದಿನಗಳ ಹಿಂದೆ ಗಾಂಧಿನಗರದ ನಿವಾಸಿ ಪಾಯಲ್ ಎಂಬಾಕೆಯ ಜೊತೆ ವಿವಾಹವಾಗಿತ್ತು.
ಶನಿವಾರದಂದು ಭವಿಕ್, ಪಾಯಲ್‌ಳನ್ನು ಕರೆದುಕೊಂಡು ಬರಲು ಆಕೆಯ ಹೆತ್ತವರ ನಿವಾಸಕ್ಕೆ ಬರುವವನಿದ್ದ. ಆದರೂ ಆತ ಬಾರದೆ ಇದ್ದಾಗ, ಪಾಯಲ್‌ಳ ತಂದೆ ಭವಿಕ್‌ನ ತಂದೆಗೆ ಕರೆ ಮಾಡಿ, ವಿಚಾರಿಸಿದ್ದರು. ಆಗ ಆತ ಮನೆಯಿಂದ ತೆರಳಿ ತುಂಬಾ ಹೊತ್ತಾಯಿತು ಎಂದು ಅವರು ತಿಳಿಸಿದ್ದರು. ಕಳವಳಗೊಂಡ ಪಾಯಲ್‌ಳ ತಂದೆ ತನ್ನ ಕುಟುಂಬದವರೊಂದಿಗೆ ಭವಿಕ್‌ಗಾಗಿ ಹುಡುಕಾಡತೊಡಗಿದ್ದರು. ಭವಿಕ್‌ನ ದ್ವಿಚಕ್ರವಾಹನವು ಅನಾಥವಾಗಿ ರಸ್ತೆಯಲ್ಲಿ ಬಿದ್ದಿರುವುದನ್ನು ಕಂಡರು.. ಭವಿಕ್ ಪ್ರಯಾಣಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಮೂವರು ಅಪರಿಚಿತರು ಎಸ್‌ಯುವಿ ವಾಹನವನ್ನು ಢಿಕ್ಕಿ ಹೊಡೆಸಿದ್ದರು. ಭವಿಕ್ ನೆಲಕ್ಕೆ ಬಿದ್ದಾಗ ಆತನನ್ನು ಅವರು ಅಹರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಸಿದ್ದರು.
ಆನಂತರ ಕುಟುಂಬಿಕರು ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಭವಿಕ್ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಎಂಬುದನ್ನು ತಿಳಿದ ಪೊಲೀಸರು ಪಾಯಲ್‌ಳನ್ನು ತೀವ್ರವಾಗಿ ವಿಚಾರಿಸಿದ್ದರು. ಕೊನೆಗೂ ತಪ್ಪೊಪ್ಪಿಕೊಂಡ ಪಾಯಲ್, ತನ್ನ ಪ್ರಿಯಕರನಾದ ಸೋದರಸಂಬಂಧಿ ಕಲ್ಪೇಶ್ ಜೊತೆಗೂಡಿ ಭವಿಕ್‌ನ ಅಪಹರಣ ಹಾಗೂ ಕೊಲೆ ಸಂಚನ್ನು ರೂಪಿಸಿದ್ದನು ಒಪ್ಪಿಕೊಂಡಳು.
ಆಕೆಯ ನೀಡಿದ ಮಾಹಿತಿಯನ್ನು ಆಧರಿಸಿ ಪೊಲೀಸರು ಕಲ್ಪೇಶ್ ಹಾಗೂ ಆತನ ಇಬ್ಬರು ಸಹಚರರನ್ನು ಪತ್ತೆ ಹಚ್ಚಿ ಬಂಧಿಸಿದರು. ತಾನು ಹಾಗೂ ಇತರ ಸಹಚರರೊಂದಿಗೆ ಭವಿಕ್‌ನನ್ನು ಅಪಹರಿಸಿದ್ದು, ಆತನನ್ನು ಎಸ್‌ಯುವಿ ವಾಹನದೊಳಗೆ ಕತ್ತುಹಿಸುಕಿ ಕೊಲೆಗೈದಿರುವುದು ವಿಚಾರಣೆಯಿಂದ ತಿಳಿದುಬಂದಿತು. ಆನಂತರ ಅವರು ಮೃತದೇಹವನ್ನು ಸಮೀಪದ ನರ್ಮದಾ ಕಾಲುವೆಗೆ ಎಸೆದಿರುವುದಾಗಿ ಅವರು ತಪ್ಪೊಪ್ಪಿಕೊಂಡಿದ್ದಾರೆ.