ಚತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ಗುಂಡಿನ ಕಾಳಗ; ಮೂವರು ಶಂಕಿತ ನಕ್ಸಲೀಯರು ಮೃತ್ಯು

ಸಾಂದರ್ಭಿಕ ಚಿತ್ರ | PC : PTI
ರಾಯಪುರ: ತೆಲಂಗಾಣ-ಚತ್ತೀಸ್‌ಗಢ ಗಡಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಗುರುವಾರ ಮುಂಜಾನೆ ಭದ್ರತಾ ಪಡೆಯ ಜಂಟಿ ತಂಡದೊಂದಿಗೆ ಗುಂಡಿನ ಕಾಳಗದಲ್ಲಿ ಕನಿಷ್ಠ ಮೂವರು ನಕ್ಸಲೀಯರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚತ್ತೀಸ್‌ಗಢ, ತೆಲಂಗಾಣ ಹಾಗೂ ಮಹಾರಾಷ್ಟ್ರ-ಈ ಮೂರು ರಾಜ್ಯಗಳ ಸುಮಾರು 7 ಸಾವಿರ ಪೊಲೀಸ್ ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರಿದಿದ್ದಾರೆ. ಅಲ್ಲದೆ ಸಿಪಿಐ (ಮಾವೋವಾದಿ) ಬೆಟಾಲಿಯನ್ ನಂಬರ್ 1, ತೆಲಂಗಾಣ ಸ್ಟೇಟ್ ಕಮಿಟಿ, ದಂಡಕಾರಣ್ಯ ಸ್ಪೆಷಲ್ ರೆನ್ ಕಮಿಟಿಗೆ ಸಂಬಂಧಿಸಿದ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.
ಅಂತರ ರಾಜ್ಯ ಗಡಿಯ ಸಮೀಪದ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆ ಕಾರ್ಯಾಚರಣೆ ಆರಂಭಿಸಿದ ಸಂದರ್ಭ ಗುಂಡಿನ ಕಾಳಗ ಆರಂಭವಾಯಿತು ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, ಕನಿಷ್ಠ ಮೂವರು ಮಾವೋವಾದಿಗಳು ಮೃತಪಟ್ಟಿದ್ದಾರೆ. ಅವರ ಮೃತದೇಹಗಳು ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಪತ್ತೆಯಾಗಿವೆ. ಕಾರ್ಯಾಚರಣೆ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ನಕ್ಸಲೀಯರ ಪರಾರಿಯಾಗುವುದು ಅಥವಾ ಪ್ರತಿದಾಳಿ ನಡೆಸುವುದನ್ನು ತಡೆಯಲು ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.