ಹರ್ಯಾಣ ಚುನಾವಣೆಗೂ ಮುನ್ನ ಜೈಲಿನಿಂದ ಹೊರಬರಲಿರುವ ಗುರ್ಮೀತ್ ಸಿಂಗ್; 4 ವರ್ಷಗಳಲ್ಲಿ 15 ಬಾರಿ ಪರೋಲ್
ಹೊಸದಿಲ್ಲಿ: ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಪರೋಲ್ ಅರ್ಜಿಗೆ ಚುನಾವಣಾ ಆಯೋಗ ಅನುಮೋದನೆ ನೀಡಿದ್ದು, ಶೀಘ್ರವಾಗಿ ಪರೋಲ್ ಮೂಲಕ ಆತ ಹೊರ ಬರಲಿದ್ದಾನೆ ಎಂದು ವರದಿಯಾಗಿದೆ.
ಕಳೆದ 9 ತಿಂಗಳಲ್ಲಿ ಮೂರು ಬಾರಿ ಪರೋಲ್ ಪಡೆದುಕೊಂಡು ಜೈಲಿನಿಂದ ಹೊರ ಬಂದಿದ್ದ ಗುರ್ಮೀತ್ ಸಿಂಗ್, ಕಳೆದ 4 ವರ್ಷಗಳಲ್ಲಿ 15 ಬಾರಿ ಜೈಲಿನಿಂದ ಹೊರ ಬಂದಿದ್ದಾನೆ.
ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಹರ್ಯಾಣ ಮತ್ತು ಪಂಜಾಬ್ ನಲ್ಲಿ ಪ್ರಭಾವ ಹೊಂದಿರುವ ಗುರ್ಮೀತ್ ಸಿಂಗ್ ಬಿಡುಗಡೆಗೆ ಸಿದ್ಧತೆ ನಡೆದಿದೆ.
ಪೆರೋಲ್ ಅವಧಿಯಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಹರ್ಯಾಣಕ್ಕೆ ತೆರಳಬಾರದು ಮತ್ತು ವೈಯ್ಯಕ್ತಿಕವಾಗಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧವನ್ನು ವಿಧಿಸಲಾಗಿದೆ.
ಗುರ್ಮೀತ್ ಸಿಂಗ್ 21 ದಿನಗಳ ಪರೋಲ್ ಬಳಿಕ ಸೆ. 2 ರಂದು ಸುನಾರಿಯಾ ಜೈಲಿಗೆ ಮರಳಿದ್ದ. 2020ರಿಂದ ಆತನನ್ನು 14 ಬಾರಿ ಎಂದರೆ 259 ದಿನಗಳು ಪರೋಲ್ ನಿಂದ ಬಿಡುಗಡೆ ಮಾಡಲಾಗಿದೆ.
ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಲೋಕಸಭೆ ಚುನಾವಣೆ ಮತ್ತು 2022ರ ಪಂಜಾಬ್ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಜಾಮೀನು ನೀಡಲಾಗಿತ್ತು. ಇದಲ್ಲದೆ 2022 ಜೂನ್ -17ರಂದು ಆತನನ್ನು ಪರೋಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ವೇಳೆ ಹರ್ಯಾಣದಲ್ಲಿ ಪುರಸಭೆ ಚುನಾವಣೆ ನಡೆಯುತ್ತಿತ್ತು.
ಗುರ್ಮೀತ್ ಸಿಂಗ್ ವಿರುದ್ಧ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಸಾಬೀತಾದ ಹಿನ್ನೆಲೆ ಆತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.