ಲೋಕಸಭಾ ಚುನಾವಣೆಗೆ ಕೈ ರಣತಂತ್ರ ; ಆಂಧ್ರಪ್ರದೇಶದ ಕಾಂಗ್ರೆಸ್ ನಾಯಕರ ಜೊತೆ ಖರ್ಗೆ ,ರಾಹುಲ್ ಮಾತುಕತೆ

Update: 2023-12-27 15:44 GMT

ಮಲ್ಲಿಕಾರ್ಜುನ ಖರ್ಗೆ,  ರಾಹುಲ್ ಗಾಂಧಿ | Photo: PTI 

ಹೊಸದಿಲ್ಲಿ: ಮುಂಬರುವ ಲೋಕಸಭಾ ಚಟುನಾವಣೆಗೆ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ ಹಾಗೂ ಪಕ್ಷದ ಇತರ ಕೇಂದ್ರೀಯ ನಾಯಕರು ಬುಧವಾರ ಪಕ್ಷದ ಆಂಧ್ರಪ್ರದೇಶ ಘಟಕದ ನಾಯಕರೊಂದಿಗೆ ಮಾತುಕತೆ ನಡೆಸಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ರಾಜ್ಯಮಟ್ಟದ  ನಾಯಕರೊಂದಿಗೆ ಸರಣಿ ಮಾತುಕತೆಗಳನ್ನು ನಡೆಸಿದ ಬೆನ್ನಲ್ಲೇ ಈ ಸಭೆ ನಡೆದಿದೆ.

ಇಂದು ನಡೆದ  ಮಾತುಕತೆಯ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ತಮ್ಮ ಅಭಿಪ್ರಾಯಗಳನ್ನು  ಹಂಚಿಕೊಂಡರು ಎಂದು ತಿಳಿಸಿದ್ದಾರೆ.

‘‘ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಸರಕಾರ ರಚನೆಯಾದ ಬಳಿಕ ಪರಿಸ್ಥಿತಿಯಲ್ಲಿ ವ್ಯಾಪಕ ಬದಲಾವಣೆಯಾಗಿದೆಯೆಂದು ಪ್ರತಿಯೊಬ್ಬರು ಭಾವಿಸಿದ್ದಾರೆ. ಪ್ರತಿಯೋರ್ವ ನಾಯಕ ಹಾಗೂ ಕಾರ್ಯಕರ್ತ ಪಕ್ಷಕ್ಕಾಗಿ ಕಠಿಣವಾಗಿ ದುಡಿಯಲಿದ್ದಾರೆ ಹಾಗೂ  ಕಾಂಗ್ರೆಸ್ ಪಕ್ಷದ ಜೊತೆ ಈ ಮೊದಲು ಆಂಧ್ರಪ್ರದೇಶದ ಜನತೆ ಹಂಚಿಕೊಂಡಿದ್ದ ಬಾಂಧವ್ಯವನ್ನು ಮರುಸ್ಥಾಪಿಸಲಿದ್ದಾರೆ ’’ ಎಂದು ಖರ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

 ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳಿದ್ದು, ಆ ಪೈಕಿ 22 ವೈಎಸ್ಆರ್ಪಿ ಪಕ್ಷದ ವಶದಲ್ಲಿವೆ. ತೆಲುಗುದೇಶಂ ಪಕ್ಷವು ಮೂರು ಸ್ಥಾನಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News