ಒಬಿಸಿ ನಾಯಕನಿಗೆ ಹರಿಯಾಣ ಸಿಎಂ ಹುದ್ದೆ: ಬಿಜೆಪಿಯಿಂದ ಮತ ಧ್ರುವೀಕರಣ ತಂತ್ರ

Update: 2024-03-13 02:41 GMT

Photo: PTI

ಚಂಡೀಗಢ: ಹರ್ಯಾಣದ ನೂತನ ಮುಖ್ಯಮಂತ್ರಿಯಾಗಿ ಇತರ ಹಿಂದುಳಿದ ವರ್ಗಕ್ಕೆ ಸೇರಿದ ನಯಾಬ್ ಸಿಂಗ್ ಸೈನಿ ಅವರನ್ನು ಆಯ್ಕೆ ಮಾಡಿರುವುದು ರಾಜ್ಯದಲ್ಲಿ ಶೇಕಡ 40ರಷ್ಟು ಇರುವ ಓಬಿಸಿ ಮತಗಳನ್ನು ಸೆಳೆಯಲು ಬಿಜೆಪಿ ಹೆಣೆದ ತಂತ್ರವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಜಾಟ್ ಸಮುದಾಯವನ್ನು ಹೊರತುಪಡಿಸಿ ಹೆಚ್ಚಿನ ಪ್ರಮಾಣದಲ್ಲಿರುವ ಇತರ ಹಿಂದುಳಿದ ವರ್ಗಗಳ ಮತಗಳು ಬಿಜೆಪಿಯತ್ತ ಧ್ರುವೀಕರಣಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸುಧೀರ್ಘ ಅವಧಿಯಿಂದ ಸಿಎಂ ಆಗಿದ್ದ ಮನೋಹರಲಾಲ್ ಖಟ್ಟರ್ ಅವರನ್ನು ದಿಢೀರ್ ಬದಲಾವಣೆ ಮಾಡಿರುವುದರಿಂದ ಆಗಬಹುದಾದ ಸಂಭಾವ್ಯ ಹಾನಿಯನ್ನು ತಡೆಯಬೇಕಾದ ಮಹತ್ವದ ಹೊಣೆ ನೂತನ ಸಿಎಂ ಮೇಲಿದೆ. ಚುಣಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಲು ಬಿಜೆಪಿ ನೇತೃತ್ವದ ಸರ್ಕಾರ ಪ್ರಯತ್ನ ನಡೆಸುತ್ತಿರುವುದು ಇದೇ ಮೊದಲಲ್ಲ.

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ಸೆಳೆಯುವ ಉದ್ದೇಶದಿಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಬಿಜೆಪಿ ಘೋಷಿಸಿತ್ತು. ಹರ್ಯಾಣ ಜಾತಿ ಸಮೀಕ್ಷೆ ನಡೆಸದೇ ಈ ನಿರ್ಧಾರವನ್ನು ಘೋಷಿಸಿದ ಮೊದಲ ರಾಜ್ಯವಾಗಿತ್ತು.

ಪರಿಶಿಷ್ಟ ಜಾತಿ ಕೋಟಾ ಅಡಿಯಲ್ಲಿ ಸರ್ಕಾರಿ ಇಲಾಖೆಗಳ ಬಡ್ತಿಯನ್ನು ಮೀಸಲಿರಿಸುವುದು ಪ್ರಸ್ತಾವಿತ ಕಾನೂನಿನ ಒಂದು ಪ್ರಮುಖ ಅಂಶವಾಗಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಶೇಕಡ 21ರಷ್ಟು ಪಾಲು ಹೊಂದಿದೆ. ಜಾಟ್ ಸಮುದಾಯದವರು ಶೇಕಡ 27ರಷ್ಟಿದ್ದು, ಇತರ ಜಾತಿಗಳ ಒಟ್ಟು ಜನಸಂಖ್ಯೆ ಶೇಖಡ 12ರಷ್ಟಾಗಿದೆ.

ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಕಂಡುಬಂದಂತೆ ಖಟ್ಟರ್ ವಿರುದ್ಧದ ಆಡಳಿತ ವಿರೋಧ ಅಲೆಯನ್ನು ತಡೆಯುವ ಪ್ರಯತ್ನವಾಗಿ ಸೈನಿ ಅವರನ್ನು ಹೊಸ ಸಿಎಂ ಆಗಿ ಪಕ್ಷ ಘೋಷಿಸಿದೆ. ಜಾಟ್ ಮತಗಳು ಪ್ರಸ್ತುತ ಐಎನ್ ಎಲ್ ಡಿ, ಜೆಜೆಪಿ ಹಾಗೂ ಕಾಂಗ್ರೆಸ್ ನಡುವೆ ವಿಭಜನೆಗೊಳ್ಳುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News