ರೈತರ ಪ್ರತಿಭಟನೆ: ಎರಡು ಕ್ರೀಡಾಂಗಣಗಳನ್ನು ತಾತ್ಕಾಲಿಕ ಕಾರಾಗೃಹಗಳನ್ನಾಗಿ ಮಾರ್ಪಡಿಸಿದ ಹರ್ಯಾಣ ಸರಕಾರ

Update: 2024-02-12 05:36 GMT

Phone: ANI

ಹೊಸದಿಲ್ಲಿ: ಮಂಗಳವಾರ ಸಾವಿರಾರು ರೈತರು ದಿಲ್ಲಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾಗಿರುವುದರಿಂದ, ಹರ್ಯಾಣ ಸರಕಾರವು ಎರಡು ಬೃಹತ್ ಕ್ರೀಡಾಂಗಣಗಳನ್ನು ತಾತ್ಕಾಲಿಕ ಕಾರಾಗೃಹಗಳನ್ನಾಗಿ ಮಾರ್ಪಡಿಸಿದೆ ಎಂದು ndtv.com ವರದಿ ಮಾಡಿದೆ.

ಒಂದು ವೇಳೆ ರೈತರೇನಾದರೂ, ಹರ್ಯಾಣದ ಗಡಿಯನ್ನು ದಾಟಲು ಮುಂದಾದರೆ, ರೈತರನ್ನು ವಶಕ್ಕೆ ಪಡೆದು ಸೆರೆಯಲ್ಲಿರಿಸಲು ಸಿರ್ಸಾದಲ್ಲಿನ ಚೌಧರಿ ದಲ್ಬೀರ್ ಸಿಂಗ್ ಒಳಾಂಗಣ ಕ್ರೀಡಾಂಗಣ ಹಾಗೂ ದಬ್ವಲಿಯಲ್ಲಿನ ಗುರು ಗೋಬಿಂದ್ ಸಿಂಗ್ ಕ್ರೀಡಾಂಗಣಗಳನ್ನು ತಾತ್ಕಾಲಿಕ ಕಾರಾಗೃಹಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಅಹಿತಕರ ಪರಿಸ್ಥಿತಿಯೇನಾದರೂ ನಿರ್ಮಾಣವಾದರೆ, ವಶಕ್ಕೆ ಪಡೆದ ಅಥವಾ ಬಂಧನಕ್ಕೊಳಗಾದ ದೊಡ್ಡ ಸಂಖ್ಯೆಯ ರೈತರನ್ನು ಈ ತಾತ್ಕಾಲಿಕ ಕಾರಾಗೃಹಗಳಲ್ಲಿರಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ನೆರೆಯ ದಿಲ್ಲಿಯ ಪ್ರಾಧಿಕಾರಗಳೂ ಕೂಡಾ ಕಾಂಕ್ರೀಟ್ ತಡೆಗೋಡೆಗಳನ್ನು ಹಲವಾರು ಸ್ಥಳಗಳಲ್ಲಿ ಅಡ್ಡಲಾಗಿರಿಸುವ ಮೂಲಕ ಗಡಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿವೆ. ರಸ್ತೆ ಮೇಲೆ ಮೊಳೆಗಳು, ಮುಳ್ಳು ತಂತಿಗಳನ್ನೂ ಅಳವಡಿಸಲಾಗಿದ್ದು, ಅಂತರ ರಾಜ್ಯ ಗಡಿಯಲ್ಲಿ ದೊಡ್ಡ ಪ್ರಮಾಣದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಈ ನಡುವೆ, ಸೋಮವಾರ(ಫೆಬ್ರವರಿ 12)ದಂದು ಕೇಂದ್ರ ಸರಕಾರವು ರೈತರ ಬೇಡಿಕೆಗಳ ಕುರಿತು ಚರ್ಚಿಸಲು ರೈತರ ಸಭೆಯನ್ನು ಕರೆದಿದೆ. ಹೀಗಿದ್ದೂ, ರೈತರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ಗಡಿಗಳನ್ನು ಮುಚ್ಚುವ ಕೇಂದ್ರ ಸರಕಾರದ ಕ್ರಮವು ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳಿಂದ ಟೀಕೆಗೆ ಗುರಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News