ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಹಾಶೀಂ ಮೂಸಾ ಪಾಕ್ ವಿಶೇಷ ಪಡೆಯ ಮಾಜಿ ಯೋಧ; ವರದಿ

ಹಾಶೀಂ ಮೂಸಾ | PC : PTI
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಪ್ರಕರಣದ ಜೊತೆ ನಂಟು ಹೊಂದಿದ್ದಾರೆಂದು ಗುರುತಿಸಲಾದ ಇಬ್ಬರು ಪಾಕ್ ಪ್ರಜೆಗಳಲ್ಲೊಬ್ಬನಾದ ಹಾಶೀಂ ಮೂಸಾ ಪಾಕಿಸ್ತಾನದ ಅರೆಸೈನಿಕ ಪಡೆಗಳ ಮಾಜಿ ಯೋಧನೆಂದು ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಹಾಶೀಂ ನಿಷೇಧಿತ ಉಗ್ರಗಾಮಿ ಸಂಘಟನೆ ಮೂಸಾ ಲಷ್ಕರೆ ತಯ್ಯಬಾಕ್ಕೆ ಸೇರ್ಪಡೆಗೊಂಡ ಬಳಿಕ ಆತನನ್ನು ಪಾಕಿಸ್ತಾನ ಸೇನೆ ಸೇವೆಯಿಂದ ವಜಾಗೊಳಿಸಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಆತ ಭಾರತದ ಗಡಿಯೊಳಗೆ ನುಸುಳಿದ್ದಾನೆಂದು ಶಂಕಿಸಲಾಗಿದೆ. ಮುಖ್ಯವಾಗಿ ಶ್ರೀನಗರ ಸಮೀಪದ ಬುಡ್ಗಾಮ್ ಜಿಲ್ಲೆಯ ಆತನ ಕಾರ್ಯಾಚರಣೆಯ ಪ್ರದೇಶವಾಗಿದೆಯೆಂದು ಮೂಲಗಳು ತಿಳಿಸಿವೆ.
ಲಷ್ಕರೆ ತಯ್ಯಬಾ ಕಾಶ್ಮೀರದಲ್ಲಿ ನಡೆಸುವ ಕಾರ್ಯಾಚರಣೆಗಳನ್ನು ಬಲಪಡಿಸುವುದಕ್ಕಾಗಿ ಆ ಗುಂಪಿಗೆ ಸೇರ್ಪಡೆಗೊಳ್ಳುವಂತೆ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗ್ರೂಪ್ (ಎಸ್‌ಎಸ್‌ಜಿ) ಹಾಶೀಂ ಮೂಸಾಗೆ ಸೂಚಿಸಿರುವ ಸಾಧ್ಯತೆಯೂ ಇದೆಯೆಂದು ಮೂಲಗಳು ತಿಳಿಸಿವೆ.
ಪಾಕ್ ಸೇನೆಯಲ್ಲಿತರಬೇತುಪಡೆದ ಪ್ಯಾರಾ ಕಮಾಂಡೊ ಆಗಿದ್ದ ಮೂಸಾ, ಅತ್ಯಾಧುನಿಕ ಯುದ್ಧ ಕೌಶಲ್ಯ ಹಾಗೂ ರಹಸ್ಯ ಕಾರ್ಯಾಚರಣೆಗಳಲ್ಲಿ ಪರಿಣಿತನೆನ್ನಲಾಗಿದೆ. ಉನ್ನತ ಮಟ್ಟದ ಸಂಚರಣೆ (ನೇವಿಗೇಶನ್) ಹಾಗೂ ಎಂತಹ ಪ್ರತಿಕೂಲ ಪರಿಸ್ಥಿತಿಲ್ಲಿಯೂ ಬದುಕುಳಿಯಲು ಸಾಧ್ಯವಾಗುವಂತಹ ತರಬೇತಿಯನ್ನು ಪಡೆದಿದ್ದಾನೆನ್ನಲಾಗಿದೆ.
ಮೂಸಾ ಪಾಕ್ ಸೇನೆಯ ವಿಶೇಷ ಸೇವಾ ಗ್ರೂಪ್‌ನ ಯೋಧನಾಗಿದ್ದನೆಂಬುದನ್ನು ಭದ್ರತಾಪಡೆಗಳು ಪಹಲ್ಗಾಂವ್ ಭಯೋತ್ಪಾದಕ ದಾಳಿ ಪ್ರಕರಣದ ಸಂಬಂಧಿಸಿ ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿರುವ 14 ಮಂದಿ ಶಂಕಿತರು ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.ಈ ಆರೋಪಿಗಳು ಪುಲ್ಗಾಂವ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಪಾಕ್ ಉಗ್ರರಿಗೆ ಸಾಗಾಟದ ಏರ್ಪಾಡುಗಳನ್ನು ಮಾಡಿದ್ದರು ಹಾಗೂ ದಾಳಿಯ ಸ್ಥಳದ ಪರಿಶೀಲನೆಗೆ ನೆರವಾಗಿದ್ದರು ಎಂದು ತನಿಖಾ ಸಂಸ್ಥೆಗಳು ಆಪಾದಿಸಿವೆ.
ಇದರೊಂದಿಗೆ ಪುಲ್ಗಾಂವ್ ದಾಳಿಯಲ್ಲಿ ಪಾಕಿಸ್ತಾನ ಸೇನೆ ಹಾಗೂ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಪಾತ್ರ ದೃಢಪಟ್ಟಿದೆಯೆಂದು ಮೂಲಗಳು ತಿಳಿಸಿವೆ.
ಪಹಲ್ಗಾಂವ್ ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರಾದ ಮೂಸಾ ಹಾಗೂ ಅಲಿ ಭಾಯಿ ಮತ್ತು ಇಬ್ಬರು ಸ್ಥಳೀಯರಾದ ಅದಿಲ್ ಥೋಕರ್ ಹಾಗೂ ಆಸೀಫ್ ಶೇಖ್ ನೇರವಾಗಿ ಶಾಮೀಲಾಗಿರುವುದು ದೃಢಪಟ್ಟಿದೆ.