ದ್ವೇಷಭಾಷಣ: ಸಂಜಯ್ ನಿರುಪಮ್ ವಿರುದ್ಧ ಹರ್ಷ ಮಂದರ್ ದೂರು
ಹೊಸದಿಲ್ಲಿ: ದ್ವೇಷಭಾಷಣದ ಆರೋಪದಲ್ಲಿ ಶಿವಸೇನಾ (ಶಿಂಧೆಬಣ) ನಾಯಕ ಸಂಜಯ್ ನಿರುಪಮ್ ವಿರುದ್ಧ ಮಾನವಹಕ್ಕುಗಳ ಕಾರ್ಯಕರ್ತ ಹರ್ಷಮಂದರ್ ಅವರು ಮಂಗಳವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಎಪ್ರಿಲ್ 4ರಂದು ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ಬೆದರಿಕೆಯ ಹೇಳಿಕೆಗಳನ್ನು ನಿರುಪಮ್ ನೀಡಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾಜಿ ಲೋಕಸಭಾ ಸದಸ್ಯರಾದ ಸಂಜಯ್ ನಿರುಪಮ್ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಬಣದ ವಕ್ತಾರರಾಗಿದ್ದಾರೆ.
ಎಪ್ರಿಲ್ 4ರಂದು ಮುಂಬೈಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರುಪಮ್ ಅವರು, ಆಗ ಸಂಸತ್ ನ ಪರಿಶೀಲನೆಯಲ್ಲಿದ್ದ 2024ರ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆನ್ನಲಾಗಿದೆ.
ನಿರುಪಮ್ ಅವರ ಹೇಳಿಕೆಯು ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷ ಹಾಗೂ ಹಿಂಸೆಯನ್ನು ಪ್ರಚೋದಿಸುತ್ತದೆ ಹಾಗೂ ಸಂವಿದಾನದತ್ತವಾದ ಶಾಂತಿಯುತ ಪ್ರತಿಭಟನೆಯ ಹಕ್ಕಿಗೆ ಚ್ಯುತಿ ತರುತ್ತದೆ ಎಂದು ಮಂದರ್ ಆಪಾದಿಸಿದ್ದಾರೆ.