ಹತ್ರಾಸ್: ಬಸ್-ಟ್ರಕ್ ನಡುವೆ ಭೀಕರ ಅಪಘಾತ: 15 ಮಂದಿ ಮೃತ್ಯು
ಉತ್ತರಪ್ರದೇಶ: ಮಿನಿ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಹತ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 93ರಲ್ಲಿ ನಡೆದಿದೆ.
ಬಸ್ ಹತ್ರಾಸ್‌ನಿಂದ ಆಗ್ರಾಕ್ಕೆ ತೆರಳುತ್ತಿದ್ದು, ಮಿನಿ ಟ್ರಕ್‌ನಲ್ಲಿದ್ದವರು ಸೇವಾಲ ಗ್ರಾಮಕ್ಕೆ ಹಿಂತಿರುಗುವಾಗ ಕನ್ವರ್‌ಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಅಪಘಾತದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಸ್ಪತ್ರೆಗೆ ತೆರಳಿ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ನಿಪುನ್ ಅಗರ್ವಾಲ್ ಈ ಕುರಿತು ಮಾಹಿತಿಯನ್ನು ನೀಡಿದ್ದು, ಆಗ್ರಾ-ಅಲಿಘರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಓವರ್‌ಟೇಕ್ ಮಾಡಲು ಪ್ರಯತ್ನಿಸುವಾಗ ಮಿನಿ ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದ ಬಗ್ಗೆ ತಿಳಿದು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪರಿಹಾರ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದಿತ್ಯನಾಥ್ ಅವರು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ 50,000ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಈ ಕುರಿತು ಮೃತರಿಗೆ ಸಂತಾಪ ಸೂಚಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.