"ನಾವೇಕೆ 16 ಮಕ್ಕಳನ್ನು ಹೊಂದಬಾರದು?": ಆಂಧ್ರ ಸಿಎಂ ಹೇಳಿಕೆಯನ್ನು ಪ್ರತಿಧ್ವನಿಸಿದ ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೆಚ್ಚು ಮಕ್ಕಳನ್ನು ಹೊಂದುವುದನ್ನು ಪ್ರತಿಪಾದಿಸಿದ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರೂ ಸೋಮವಾರ ರಾಜ್ಯದ ಜನತೆಗೆ ಇಂತಹುದೇ ಆಗ್ರಹವನ್ನು ಮಾಡಿದ್ದಾರೆ.
ಇಲ್ಲಿ ಸರಕಾರದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ವಿವಾಹಗಳ ಸಮಾರಂಭದಲ್ಲಿ ಮಾತನಾಡಿದ ಸ್ಟಾಲಿನ್, ‘‘ತಮಿಳಿನಲ್ಲಿ ‘ಜನರು 16 ವಿವಿಧ ರೀತಿಗಳ ಸಂಪತ್ತನ್ನು ಹೊಂದಿರಬೇಕು’ ಎಂಬ ಹಳೆಯ ಗಾದೆಯೊಂದಿದೆ. ಆದರೆ ಇಂದು ಲೋಕಸಭಾ ಕ್ಷೇತ್ರಗಳು ಕಡಿಮೆಯಾಗುವ ಸನ್ನಿವೇಶವಿದ್ದು, ಇದು ನಾವು ನಮ್ಮನ್ನೇಕೆ ಕಡಿಮೆ ಮಕ್ಕಳಿಗೆ ನಿರ್ಬಂಧಿಸಿಕೊಳ್ಳಬೇಕು? ನಾವೇಕೆ 16 ಮಕ್ಕಳನ್ನು ಹೊಂದುವ ಗುರಿಯನ್ನಿಟ್ಟುಕೊಳ್ಳಬಾರದು’’ ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ನಾಯ್ಡು ಅವರು, ರಾಜ್ಯದಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಪ್ರೋತ್ಸಾಹ ಧನವನ್ನು ನೀಡಲು ಆಂಧ್ರಪ್ರದೇಶ ಸರಕಾರವು ಯೋಜಿಸುತ್ತಿದೆ ಎಂದು ಪ್ರಕಟಿಸಿದ್ದರು. ಹೆಚ್ಚು ಮಕ್ಕಳನ್ನು ಹೊಂದುವಂತೆ ದಕ್ಷಿಣ ಭಾರತದ ರಾಜ್ಯಗಳ ಜನರಿಗೆ ಅವರು ಆಗ್ರಹಿಸಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರಗಳ ಮರುಹೊಂದಾಣಿಕೆಗೆ ಯೋಚಿಸುತ್ತಿದೆ ಎಂಬ ವರದಿಗಳ ಬಳಿಕ ಉಭಯ ಮುಖ್ಯಮಂತ್ರಿಗಳ ಹೇಳಿಕೆಗಳು ಹೊರಬಿದ್ದಿವೆ.