"ಕನಿಷ್ಠ ಮಾನವೀಯತೆ ಇರಲಿ": ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಮೃತನ ಪತ್ನಿ

ಹೊಸದಿಲ್ಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿಕ್ಕುವ ಮೊದಲು ನಮ್ಮ ಧರ್ಮವನ್ನು ಕೇಳಿದರು ಎಂಬ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಜಕಾರಣಿಗಳಿಗೆ ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಮೃತ ಸಂತೋಷ್ ಪತ್ನಿ ಪ್ರಗತಿ ಜಗದಾಳೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಹಲ್ಗಾಮ್ ಪಟ್ಟಣದಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡುವ ಮೊದಲು ಭಯೋತ್ಪಾದಕರು ಪ್ರವಾಸಿಗರ ಧರ್ಮವನ್ನು ಕೇಳಿದರು ಎಂಬ ಹೇಳಿಕೆಯ ಸತ್ಯಾಸತ್ಯತೆಯನ್ನು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಗತಿ ಜಗದಾಳೆ, ದಯವಿಟ್ಟು ಘಟನೆಯನ್ನು ರಾಜಕೀಯಗೊಳಿಸಬೇಡಿ, ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ. ನಾವು ಅಲ್ಲಿದ್ದೆವು, ಭಯೋತ್ಪಾದಕರು ಏನು ಹೇಳಿದ್ದಾರೆಂದು ನಮಗೆ ಗೊತ್ತಿದೆ. ನಾವು ಭಯೋತ್ಪಾದನೆಯನ್ನು ಅನುಭವಿಸಿದ್ದೇವೆ. ದ್ವೇಷದ ಮಾತುಗಳನ್ನು ಕೇಳಿದ್ದೇವೆ. ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ ಎಂದು ನಾನು ಎಲ್ಲಾ ರಾಜಕಾರಣಿಗಳಿಗೆ ಮಾನವೀಯ ನೆಲೆಯಲ್ಲಿ ಒತ್ತಾಯಿಸುತ್ತೇನೆ ಎಂದು ಪ್ರಗತಿ ಜಗದಾಳೆ ಮನವಿ ಮಾಡಿಕೊಂಡಿದ್ದಾರೆ.
ಭಯೋತ್ಪಾದಕರು ಮುಸ್ಲಿಮೇತರರನ್ನು ಗುರುತಿಸಿದ್ದಾರೆ. ನಮಗೆ ಇನ್ನೂ ಭಯೋತ್ಪಾದಕ ದಾಳಿ ಕಾಡುತ್ತಿದೆ. ನಾನು ಕಣ್ಣು ಮುಚ್ಚಿದಾಗಲೆಲ್ಲ ಓರ್ವ ವ್ಯಕ್ತಿ ರೈಫಲ್ ಹಿಡಿದಿರುವುದು ನನ್ನ ಕಣ್ಣ ಮುಂದೆ ಬರುತ್ತಿದೆ. ನನಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಆಘಾತವು ಬಹಳ ಆಳವಾಗಿದೆ ಎಂದು ಹೇಳಿದ್ದಾರೆ.
ಭಯೋತ್ಪಾದಕರು ಗುಂಡಿಕ್ಕುವ ಮೊದಲು ನಮ್ಮ ಧರ್ಮವನ್ನು ಕೇಳಿದರು. ನಾವು ಅವರಿಗೆ ನಮ್ಮ ಕೈಗಳನ್ನು ಮುಗಿದು ಮನವಿ ಮಾಡಿದ್ದೇವೆ. ನಮ್ಮನ್ನು ಅನುಮಾನಿಸುವವರು ಕನಿಷ್ಠ ಮಾನವೀಯತೆಯ ಬಗ್ಗೆ ಯೋಚಿಸಬೇಕು ಎಂದು ಪ್ರಗತಿ ಹೇಳಿದ್ದಾರೆ.