ಮಲಗುಂಡಿ ಸ್ವಚ್ಛತೆ ವೇಳೆ ಸಂಭವಿಸಿದ ಎಲ್ಲ ಸಾವುಗಳಿಗೂ ತಲಾ 30 ಲಕ್ಷ ರೂ. ಪರಿಹಾರ ಪಾವತಿಸಿ: ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2024-02-07 13:23 GMT

ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ಮಲಗುಂಡಿ ಸ್ವಚ್ಛತೆ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹೆಚ್ಚುವರಿ 20 ಲಕ್ಷ ರೂ. ಪರಿಹಾರವನ್ನು ಪಾವತಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ದಿಲ್ಲಿ ಸರಕಾರಕ್ಕೆ ಸೂಚಿಸಿದೆ.

ಓರ್ವ ವ್ಯಕ್ತಿಯು ನ್ಯಾಯಾಲಯವನ್ನು ಸಂಪರ್ಕಿಸಿ ತನ್ನ ಪರವಾಗಿ ಆದೇಶವನ್ನು ಪಡೆದುಕೊಂಡಿದ್ದಾಗ ಸರಕಾರವು ಅದೇ ಸ್ಥಿತಿಯಲ್ಲಿರುವ ಎಲ್ಲ ವ್ಯಕ್ತಿಗಳಿಗೂ ಅಂತಹುದೇ ಲಾಭವನ್ನು ನೀಡಬೇಕೇ ಹೊರತು ಅವರೂ ನ್ಯಾಯಾಲಯದ ಮೆಟ್ಟಿಲನ್ನೇರುವುದನ್ನು ಅನಿವಾರ್ಯವಾಗಿಸಬಾರದು ಎಂದು ನ್ಯಾ.ಸುಬ್ರಮಣಿಯಂ ಪ್ರಸಾದ್ ಅವರ ಪೀಠವು ಹೇಳಿತು.

ದೈಹಿಕವಾಗಿ ಮಲಗುಂಡಿಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಂಭವಿಸಿದ ಎಲ್ಲ ಸಾವುಗಳಿಗೂ ಸರಕಾರವು ಬಾಕಿ ಉಳಿದಿರುವ 20 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲು ಪ್ರಯತ್ನಿಸುತ್ತದೆ ಎಂದು ನ್ಯಾಯಾಲಯವು ನಿರೀಕ್ಷಿಸುತ್ತದೆ ಎಂದರು.

ದಿಲ್ಲಿ ಸರಕಾರದಿಂದ ಈವರೆಗೆ ತಮಗೆ ಕೇವಲ 10 ಲಕ್ಷ ರೂ.ಗಳ ಪರಿಹಾರ ಲಭಿಸಿದೆ ಎಂದು ಮೃತವ್ಯಕ್ತಿಗಳ ವಿಧವೆಯರು ತಮ್ಮ ಅರ್ಜಿಗಳಲ್ಲಿ ತಿಳಿಸಿದ್ದರು.

ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಈ ಕುಟುಂಬಗಳು ಸರಕಾರದಿಂದ 30 ಲಕ್ಷ ರೂ.ಪರಿಹಾರವನ್ನು ಪಡೆಯಲು ಅರ್ಹವಾಗಿವೆ ಎಂದು ನ್ಯಾ. ಪ್ರಸಾದ್ ಹೇಳಿದರು.

ಕಳೆದ ವರ್ಷದ ಅಕ್ಟೋಬರ್ ನಲ್ಲಿ ಸರ್ವೋಚ್ಚ ನ್ಯಾಯಾಲಯವು ಮಲಗುಂಡಿ ಸ್ವಚ್ಛತೆ ವೇಳೆ ಸಂಭವಿಸುವ ಸಾವುಗಳಿಗೆ ಪರಿಹಾರವನ್ನು 10 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಿತ್ತು. ಖಾಯಂ ಅಂಗವೈಕಲ್ಯಕ್ಕೆ 20 ಲಕ್ಷ ರೂ.ಮತ್ತು ಇತರ ಅಂಗವೈಕಲ್ಯಗಳಿಗೆ 10 ಲಕ್ಷ ರೂ.ಪರಿಹಾರವನ್ನು ನೀಡಬೇಕು ಎಂದೂ ಅದು ತಿಳಿಸಿತ್ತು. ಈ ಪರಿಹಾರ ಮೊತ್ತವನ್ನು ಸ್ವೀಕರಿಸದ ಯಾವುದೇ ಸಂತ್ರಸ್ತರಿಗೂ ಅದನ್ನು ಪಾವತಿಸಬೇಕು ಎಂದು ಅದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News