ಎಂಟು ರಾಜ್ಯಗಳಿಗೆ ಬಿಸಿಗಾಳಿ ಎಚ್ಚರಿಕೆ; ದಿಲ್ಲಿಯಲ್ಲಿ 42 ಡಿ.ಸೆ. ಉಷ್ಣತೆ ಸಾಧ್ಯತೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ವಾಯುವ್ಯ ಭಾರತವು ಮುಂದಿನ ಆರು ದಿನಗಳಲ್ಲಿ ಬಿಸಿಗಾಳಿ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ ಮತ್ತು ಎ.6 ಅಥವಾ 7ರಂದು ದಿಲ್ಲಿಯ ಕೆಲವು ಸ್ಥಳಗಳಲ್ಲಿ ಹಗಲಿನ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯು ಶುಕ್ರವಾರ ಎಚ್ಚರಿಕೆ ನೀಡಿದೆ.
ಬಿಸಿಗಾಳಿಯಿಂದ ಬಾಧಿತಗೊಳ್ಳಬಹುದಾದ ಪ್ರದೇಶಗಳಲ್ಲಿ ದಕ್ಷಿಣ ಹರ್ಯಾಣ, ದಿಲ್ಲಿ, ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಮಧ್ಯಪ್ರದೇಶ ಸೇರಿವೆ.
ಈ ಅವಧಿಯಲ್ಲಿ ಮಧ್ಯ ಮತ್ತು ವಾಯುವ್ಯ ಭಾರತದ ಹಲವೆಡೆಗಳಲ್ಲಿ ಗರಿಷ್ಠ ತಾಪಮಾನವು 2ರಿಂದ 4 ಡಿ.ಸೆ. ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
ಎಪ್ರಿಲ್‌ನಿಂದ ಜೂನ್‌ವರೆಗೆ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನವು ದಾಖಲಾಗುವ ಮತ್ತು ಮಧ್ಯ ಹಾಗೂ ಪೂರ್ವ ಭಾರತ ಮತ್ತು ವಾಯುವ್ಯ ಬಯಲು ಪ್ರದೇಶಗಳು ಹೆಚ್ಚು ಬಿಸಿಗಾಳಿಯ ದಿನಗಳನ್ನು ನೋಡಲಿವೆ ಎಂದು ಐಎಂಡಿ ಈ ವಾರದ ಆರಂಭದಲ್ಲಿ ತಿಳಿಸಿತ್ತು.
ಸಾಮಾನ್ಯವಾಗಿ ಭಾರತದಲ್ಲಿ ಎಪ್ರಿಲ್ ಮತ್ತು ಜೂನ್ ನಡುವೆ ನಾಲ್ಕರಿಂದ ಏಳು ಬಿಸಿಗಾಳಿಯ ದಿನಗಳು ದಾಖಲಾಗುತ್ತವೆ.