ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ; ಪ್ರವಾಹ ಭೀತಿ

Update: 2024-11-28 14:54 GMT

PC : PTI 

ನಾಗಪಟ್ಟನಂ : ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ತಗ್ಗುಪ್ರದೇಶಗಳಲ್ಲಿ ವಾಸಿಸುತ್ತಿರುವ 1200ಕ್ಕೂ ಅಧಿಕ ಮಂದಿಯನ್ನು ಆಶ್ರಯ ಕೇಂದ್ರಗಳಿಗೆ ಹಾಗೂ ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.

ನಾಗಪಟ್ಟಣಂನಲ್ಲಿ 371 ಕುಟುಂಬಗಳ 1032 ಮಂದಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 12 ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಇತರ ಹಲವಾರು ಮಂದಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ತೆರವುಗೊಳಿಸಲಾಗಿದೆ.

ನಾಗಪಟ್ಟಣಂನ ಸೂರ್ಯನಗರ ಪ್ರದೇಶದಲ್ಲಿ ವಾಸವಾಗಿರುವ 45 ಕುಟುಂಬಗಳ ಸುಮಾರು 110 ಮಂದಿಯನ್ನು ಮುನ್ಸಿಪಾಲಿಟಿ ಮಾಧ್ಯಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ. ಪೆರಿಯನರಿಯಕಾಡ್ ಪ್ರದೇಶದಿಂದ 67 ಕುಟುಂಬಗಳ ಒಟ್ಟು 231 ಮಂದಿಗೆ ಪಂಚಾಯತ್ಯೂನಿಯನ್ ಪ್ರಾಥಮಿಕ ಶಾಲಾ ಕಟ್ಟಡಕ್ಕೆ, ಪಾಪಕೋವಿಲ್ನಿಂದ 72 ಕುಟುಂಬಗಳ 180 ಮಂದಿ ಹಾಗೂ ಪರಂಗಿನಲೂರುವಿನಲ್ಲಿ 40 ಕುಟುಂಬಗಳ 120 ಮಂದಿಯನ್ನು ಖಾಸಗಿ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ.

ವೇದಾರಣ್ಯಂ ಬ್ಲಾಕ್ನಲ್ಲಿನ 13 ಕುಟುಂಬಗಳ 30 ಮಂದಿಗೆ ಅಗಸ್ತ್ಯಂಪಳ್ಳಿಯಲ್ಲಿರುವ ವಿವಿಧೋದ್ದೇಶಿ ಆಶ್ರಯಕೇಂದ್ರದಲ್ಲಿ ಮತ್ತು ಇತರ 80 ಮಂದಿಗೆ ಆದಿದ್ರಾವಿಡರ್ ಮಹಿಳಾ ಕಲ್ಯಾಣ ವಸತಿನಿಲಯದಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿದೆ.

ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ, ಮಕ್ಕಳ ಕಲ್ಯಾಣ ಹಾಗೂ ವಿಶೇಷ ಸೇವೆಗಳ ನಿರ್ದೇಶಕ ಜಾನಿ ಟಾಮ್ ವರ್ಗೀಸ್ ಮತ್ತು ನಾಗಪಟ್ಟಣಂ ಜಿಲ್ಲಾಧಿಕಾರಿ ಪಿ.ಆಕಾಶ್ ಅವರು ಪರಿಹಾರ ಶಿಬಿರಗಳಿಗೆ ಭೇಟ ನೀಡಿದ್ದು, ಅಲ್ಲಿ ಸಂತ್ರಸ್ತರಿಗೆ ಒದಗಿಸುತ್ತಿರುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ. ಸಾಮಾನ್ಯ ಪಾಕಶಾಲೆಯೊಂದರಿಂದಲೇ ಸಂತ್ರಸ್ತರಿಗೆ ಆಹಾರವನ್ನು ಸಿದ್ಧಪಡಿಸಲಾಗುತ್ತದೆ ಎಂದು ಅಕಾಶ್ ಅವರು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ 150ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News