ಜಾರ್ಖಂಡ್‌ ಸಿಎಂ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದ ಈಡಿ ಅಧಿಕಾರಿಗಳು

Update: 2024-01-29 09:58 GMT

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ (Photo: PTI)

ರಾಂಚಿ: ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರ ಅಧಿಕೃತ ನಿವಾಸಕ್ಕೆ ಇಂದು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಮಿಸಿದಾಗ ಸಿಎಂ ತಮ್ಮ ನಿವಾಸದಲ್ಲಿರಲಿಲ್ಲ. ಅವರು ಕಳೆದ ಮಧ್ಯರಾತ್ರಿಯೇ ತಮ್ಮ ಅಧಿಕೃತ ನಿವಾಸದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆಂದು ಈಡಿ ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಈಡಿ ತಂಡ ಸೊರೇನ್‌ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಶೋಧ ಕಾರ್ಯಾಚರಣೆ ನಡೆಸಿದ ಹಾಗೂ ಅವರು ಈಗ ಎಲ್ಲಿದ್ದಾರೆಂದು ಪತ್ತೆಹಚ್ಚಲು ಯತ್ನಿಸುತ್ತಿದೆ ಎಂದು ಈಡಿ ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಂದಿನ ವಾರ ವಿಚಾರಣೆಗೆ ಹಾಜರಾಗುವಂತೆ ಹತ್ತನೇ ಸಮನ್ಸ್‌ ಅನ್ನು ಈಡಿ ಜನವರಿ 27ರಂದು ಸೊರೇನ್‌ ಅವರಿಗೆ ನೋಟಿಸ್‌ ನೀಡಿತ್ತು. ಈಗಾಗಲೇ ಒಂಬತ್ತು ಬಾರಿ ಸೊರೇನ್‌ ಅವರು ಈಡಿ ಸಮನ್ಸ್‌ಗೆ ಹಾಜರಾಗಿಲ್ಲ. ಈ ಕಾರಣ ಜನವರಿ 29 ಅಥವಾ 31ರಂದು ಅವರು ವಿಚಾರಣೆಗೆ ಹಾಜರಾಗುವ ಬಗ್ಗೆ ದೃಢೀಕರಣಕ್ಕೆ ಅವರಿಗೆ ಕೇಳಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ದೊರೆಯದೇ ಇರುವ ಹಿನ್ನೆಲೆಯಲ್ಲಿ ಮತ್ತೆ ಸಮನ್ಸ್‌ ನೀಡಲಾಗಿತ್ತು.

ಜನವರಿ 20ರಂದು ಮೊದಲ ಬಾರಿಗೆ ಈ ಪ್ರಕರಣದಲ್ಲಿ ಈಡಿ ಸೊರೇನ್‌ ಅವರ ಹೇಳಿಕೆ ದಾಖಲಿಸಿತ್ತು. ರಾಂಚಿಯಲ್ಲಿನ ಅವರ ಅಧಿಕೃತ ನಿವಾಸದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಅವರ ಹೇಳಿಕೆಯನ್ನು ಏಳು ಗಂಟೆಗಳ ಅವಧಿಯಲ್ಲಿ ದಾಖಲಿಸಲಾಗಿತ್ತು. ಆದರೆ ಆ ದಿನ ವಿಚಾರಣೆ ಪೂರ್ಣಗೊಂಡಿರದೇ ಇರುವುದರಿಂದ ಮತ್ತೆ ಸಮನ್ಸ್‌ ಜಾರಿಗೊಳಿಸಲಾಗಿತ್ತು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗಳಿಂದ ಗಳಿಸಿದ ರೂ. 100 ಕೋಟಿ ಹಣದ ಕುರಿತಂತೆ 2022ರಿಂದ ಈಡಿ ತನಿಖೆ ನಡೆಸುತ್ತಿದ್ದು ಈ ಪ್ರಕರಣದಲ್ಲಿ 2011 ಬ್ಯಾಚ್‌ ಐಎಎಸ್‌ ಅಧಿಕಾರಿ ಛವಿ ರಂಜನ್‌ ಸೇರಿದಂತೆ 14 ಜನರನ್ನು ಈಡಿ ಬಂಧಿಸಿದೆ. ರಂಜನ್‌ ಅವರು ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಹಾಗೂ ರಾಂಚಿಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News