ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸುಳಿವು ಅಲಭ್ಯ!; ರಾಂಚಿಯಲ್ಲೇ ಇರಲು ಶಾಸಕರಿಗೆ ಸೂಚನೆ
ಹೊಸದಿಲ್ಲಿ: ಭೂ ಅವ್ಯವಹಾರ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎಲ್ಲ ಶಾಸಕರು ರಾಂಚಿಯಲ್ಲೇ ವಾಸ್ತವ್ಯ ಇರುವಂತೆ ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಎಲ್ಲ ಶಾಸಕರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಮಂಗಳವಾರ ಕರೆದ ಸಭೆಯಲ್ಲಿ ಭಾಗವಹಿಸುವಂತೆ ಸೂಚಿಸಲಾಗಿದೆ.
ಜೆಎಂಎಂ, ಕಾಂಗ್ರೆಸ್ ಹಾಗೂ ರಾಷ್ಟ್ರೀಯ ಜನತಾದಳ ಆಡಳಿತಾರೂಢ ಮೈತ್ರಿಕೂಟದ ಘಟಕ ಪಕ್ಷಗಳಾಗಿವೆ. ಮುಖ್ಯಮಂತ್ರಿ ನಿವಾಸದಲ್ಲಿ ಕರೆದಿರುವ ಈ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಮತ್ತು ಕಾನೂನು ಜಾರಿ ನಿರ್ದೇಶನಾಲಯ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಭೂ ಅವ್ಯವಹಾರ ಪ್ರಕರಣದಲ್ಲಿ ವಿಚಾರಣೆ ನಡೆಸುವ ಸಂಬಂಧವೂ ಚರ್ಚೆ ನಡೆಯಲಿದೆ ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ವಿನೋದ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆಡಳಿತಾರೂಢ ಮೈತ್ರಿಕೂಟದ ಸದಸ್ಯರು ಭವಿಷ್ಯದ ನಡೆ ಬಗ್ಗೆ ಚರ್ಚಿಸಲು ಮಂಗಳವಾರ ಸಭೆ ನಡೆಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜನವರಿ 31ರಂದು ಮಧ್ಯಾಹ್ನ 1 ಗಂಟೆಗೆ ರಾಂಚಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭೂ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಒಪ್ಪಿಕೊಂಡಿದ್ದು, ಈ ಸಂಬಂಧ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಇ-ಮೇಲ್ ಸಂದೇಶ ರವಾನಿಸಿದ್ದಾರೆ. ಸೊರೇನ್ ರಾಂಚಿಗೆ ವಾಪಸ್ಸಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
"ನಿಮ್ಮಂತೆ ನಾವು ಕೂಡಾ ಮುಖ್ಯಮಂತ್ರಿಯವರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಯಾರೂ ಕಾನೂನಿಗಿಂತ ಮೇಲಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎನ್ನುವುದು ನಮ್ಮ ಬಯಕೆ" ಎಂದು ಜಾರ್ಖಂಡ್ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಹೇಳಿದ್ದಾರೆ.
ಏತನ್ಮಧ್ಯೆ ಸೊರೇನ್ ಅವರ ದೆಹಲಿ ನಿವಾಸದ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆಸಿದ ನಿರ್ದೇಶನಾಲಯ ಅಧಿಕಾರಿಗಳು 2 ಬಿಎಂಡಬ್ಲ್ಯು ಕಾರು ಮತ್ತು 36 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಆದರೆ ಸೊರೇನ್ ತಲೆ ಮರೆಸಿಕೊಂಡಿದ್ದಾಗಿ ಅಧಿಕೃತ ಮೂಲಗಳು ಹೇಳಿವೆ. ಜನವರಿ 20ರಂದು ಈಗಾಗಲೇ ಸೊರೇನ್ ಅವರನ್ನು ಈ ಪ್ರಕರಣ ಸಂಬಂಧ ವಿಚಾರಣೆಗೆ ಗುರಿಪಡಿಸಲಾಗಿತ್ತು.