ರಾಜಕೀಯ ವಾಕ್ಸಮರಕ್ಕೆ ಪರಸ್ಪರರ ಕುಟುಂಬಗಳನ್ನು ಎಳೆದು ತಂದ ಹಿಮಂತ ಬಿಸ್ವ ಶರ್ಮ ಮತ್ತು ಗೌರವ್ ಗೊಗೊಯಿ!

Update: 2025-04-27 22:46 IST
ರಾಜಕೀಯ ವಾಕ್ಸಮರಕ್ಕೆ ಪರಸ್ಪರರ ಕುಟುಂಬಗಳನ್ನು ಎಳೆದು ತಂದ ಹಿಮಂತ ಬಿಸ್ವ ಶರ್ಮ ಮತ್ತು ಗೌರವ್ ಗೊಗೊಯಿ!

Photo Credit: PTI, X/@GauravGogoiAsm

  • whatsapp icon

► ತಾವೂ ಕೂಡಾ ಮೂರು ಪ್ರಶ್ನೆಗಳನ್ನು ಕೇಳಿ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ

ಗುವಾಹಟಿ: ಕಾಂಗ್ರೆಸ್ ಪಕ್ಷದ ಸಂಸದ ಹಾಗೂ ಲೋಕಸಭಾ ಉಪ ನಾಯಕ ಗೌರವ್ ಗೊಗೊಯಿ ಅವರ ಪತ್ನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮಾಡಿದ್ದ ಪೋಸ್ಟ್, ಅವರಿಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಈ ವಿಷಯದ ಚರ್ಚೆಯ ನಡುವೆ ಇಬ್ಬರೂ ನಾಯಕರು ಪರಸ್ಪರರ ಕುಟುಂಬಗಳನ್ನು ಎಳೆದು ತಂದಿದ್ದಾರೆ.

ಎಕ್ಸ್ ನಲ್ಲಿ ಗೌರವ್ ಗೊಗೊಯಿಗೆ ಮೂರು ಪ್ರಶ್ನೆಗಳನ್ನು ಎಸೆಯುವ ಮೂಲಕ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ಕೆಸರೆರಚಾಟಕ್ಕೆ ಚಾಲನೆ ನೀಡಿದ್ದಾರೆ. ಅದಕ್ಕೆ ಪ್ರತಿಯಾಗಿ, ಗೌರವ್ ಗೊಗೊಯಿ ಕೂಡಾ ಅದೇ ವೇದಿಕೆಯಲ್ಲಿ ಹಿಮಂತ ಬಿಸ್ವ ಶರ್ಮಗೆ ಮೂರು ಪ್ರಶ್ನೆಗಳನ್ನು ಎಸೆಯುವ ಮೂಲಕ ತಿರುಗೇಟು ನೀಡಿದ್ದಾರೆ.

ತಮ್ಮ ಪ್ರಥಮ ಪೋಸ್ಟ್ ನಲ್ಲಿ ಯಾರೊಬ್ಬರ ಹೆಸರನ್ನೂ ಉಲ್ಲೇಖಿಸದೆ, “ನೀವೇನಾದರೂ ಸತತ 15 ದಿನಗಳ ಕಾಲ ಪಾಕಿಸ್ತಾನದಲ್ಲಿ ಉಳಿದುಕೊಂಡಿದ್ದಿರಾ? ಹಾಗೂ ನಿಮ್ಮ ಪತ್ನಿಯೇನಾದರೂ ನೆರೆಯ ದೇಶವಾದ ಪಾಕಿಸ್ತಾನದ ಸರಕಾರೇತರ ಸಂಸ್ಥೆಯೊಂದರಿಂದ ವೇತನ ಸ್ವೀಕರಿಸುತ್ತಿದ್ದಾರೆಯೆ?” ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರನ್ನು ಪರೋಕ್ಷವಾಗಿ ಪ್ರಶ್ನಿಸಿದ್ದರು.

“ಭಾರತದಲ್ಲಿ ನೆಲೆಸಿ, ಇಲ್ಲಿಯೇ ಕೆಲಸ ಮಾಡುತ್ತಿದ್ದರೂ, ಕಾಂಗ್ರೆಸ್ ಸಂಸದರ ಪತ್ನಿಯೇನಾದರೂ ಪಾಕಿಸ್ತಾನ ಮೂಲದ ಸರಕಾರೇತರ ಸಂಸ್ಥೆಯೊಂದರಿಂದ ವೇತನ ಸ್ವೀಕರಿಸುವುದನ್ನು ಮುಂದುವರಿಸಿದ್ದಾರೆಯೆ?” ಎಂದು ಅವರು ಮೂರನೆಯ ಪ್ರಶ್ನೆ ಕೇಳಿದ್ದರು.

“ಹೌದಾಗಿದ್ದರೆ, ಪಾಕಿಸ್ತಾನ ಮೂಲದ ಸಂಸ್ಥೆಯೊಂದು ಭಾರತದಲ್ಲಿ ನಡೆಸಲಾಗುತ್ತಿರುವ ಚಟುವಟಿಕೆಗಳಿಗೆ ಯಾಕೆ ವೇತನ ಪಾವತಿಸುತ್ತಿದೆ ಎಂದು ನಾವು ಕೇಳಬಹುದೆ?” ಎಂದೂ ಅವರು ಪ್ರಶ್ನಿಸಿದ್ದರು. ಅಲ್ಲದೆ, ಸಂಸದ ಗೌರವ್ ಗೊಗೊಯಿ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಪೌರತ್ವದ ಸ್ಥಿತಿಯ ಕುರಿತೂ ಅವರು ಪ್ರಶ್ನಿಸಿದ್ದರು.

“ಅವರು ಭಾರತೀಯ ನಾಗರಿಕರೆ ಅಥವಾ ಬೇರಾವುದಾದರೂ ದೇಶದ ನಾಗರಿಕತ್ವ ಹೊಂದಿದ್ದಾರೆಯೆ? ಇನ್ನೂ ಹಲವಾರು ಪ್ರಶ್ನೆಗಳು ಹಿಂಬಾಲಿಸಲಿವೆ” ಎಂದೂ ಅವರು ಎಚ್ಚರಿಕೆ ನೀಡಿದ್ದರು.

ಹಿಮಂತ ಬಿಸ್ವ ಶರ್ಮರ ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಗೌರವ್ ಗೊಗೊಯಿ, ತಾವೂ ಕೂಡಾ ಮೂರು ಪ್ರಶ್ನೆುಗಳನ್ನು ಕೇಳುವ ಮೂಲಕ ಅವರಿಗೆ ತಿರುಗೇಟು ನೀಡಿದ್ದಾರೆ.

“ಗೌರವಾನ್ವಿತ ಅಸ್ಸಾಂ ಮುಖ್ಯಮಂತ್ರಿಗಳಿಗೆ ಮೂರು ಪ್ರಶ್ನೆಗಳು: 1) ನಾನು ಹಾಗೂ ನನ್ನ ಪತ್ನಿ ಯಾವುದೇ ಶತ್ರು ದೇಶದ ಏಜೆಂಟ್ ಗಳು ಎಂಬ ನಿಮ್ಮ ಆರೋಪಗಳನ್ನು ಸಾಬೀತು ಮಾಡಲು ನೀವು ವಿಫಲರಾದರೆ, ಅದಕ್ಕಾಗಿ ರಾಜೀನಾಮೆ ಸಲ್ಲಿಸುತ್ತೀರಾ? 2) ನೀವು ನಿಮ್ಮ ಸ್ವಂತ ಮಕ್ಕಳು ಹಾಗೂ ಪತ್ನಿಯ ಕುರಿತ ಪ್ರಶ್ನೆಗಳನ್ನೂ ಸ್ವೀಕರಿಸುತ್ತೀರಾ? 3) ಅಸ್ಸಾಂ ಬೆಟ್ಟಗಳನ್ನು ಅಗೆದು ಹಾಳು ಮಾಡುತ್ತಾ, ಕೋಟ್ಯಂತರ ರೂಪಾಯಿ ಅಘೋಷಿತ ಹಣವನ್ನು ಗಳಿಸುತ್ತಿರುವ ಕಲ್ಲಿದ್ದಲು ಮಾಫಿಯಾಗೆ ಸಂಬಂಧಿಸಿದ ವ್ಯಕ್ತಿಗಳನ್ನು ರಾಜ್ಯ ಪೊಲೀಸರು ಬಂಧಿಸುತ್ತಾರೆಯೆ?” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುನ್ನ, ಶನಿವಾರದಂದು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಗೌರವ್ ಗೊಗೊಯಿ, “ಮೇಘಾಲಯದಲ್ಲಿ ಲಂಗುಲಗಾಮಿಲ್ಲದೆ ರ್ಯಾಟ್ ಹೋಲ್ ಗಣಿಗಾರಿಕೆಯನ್ನು ನಡೆಸಲಾಗುತ್ತಿದ್ದು, ಎರಡೂ ರಾಜ್ಯಗಳಿಗೆ ಸೇರಿದ ಜನರ ಸಿಂಡಿಕೇಟ್ ಒಂದು ಅಕ್ರಮ ಕಲ್ಲಿದ್ದಲು ಹೊತ್ತ ಟ್ರಕ್ ಗಳು ಮೇಘಾಲಯದ ಗಡಿಗಳನ್ನು ದಾಟಿ, ಅಸ್ಸಾಂ ಪ್ರವೇಶಿಸುವುದನ್ನು ಖಾತರಿಪಡಿಸುತ್ತಿವೆ ಎಂಬ ಸಂಗತಿ ಜಾರಿ ನಿರ್ದೇಶನಾಲಯದ ಶೋಧನೆಯಲ್ಲಿ ಪತ್ತೆಯಾಗಿದೆ” ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆಯೆ ಅವರು ಮೇಲಿನ ಮೂರನೆಯ ಪ್ರಶ್ನೆ ಕೇಳಿದ್ದಾರೆ.

ಈ ಮೂರು ಪ್ರಶ್ನೆೆಗಳೊಂದಿಗೆ, “ವಿಶೇಷ ತನಿಖಾ ತಂಡದ ವರದಿ ಸಲ್ಲಿಕೆಯಾಗುವುದನ್ನು ಕಾಯುತ್ತಿದ್ದೇನೆ” ಎಂದೂ ಗೌರವ್ ಗೊಗೊಯಿ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಆದರೆ, ತಾನು ಯಾವ ತನಿಖೆಯ ಬಗ್ಗೆ ಉಲ್ಲೇಖಿಸುತ್ತಿದ್ದೇನೆ ಎಂಬುದರ ಕುರಿತು ಅವರು ಸ್ಪಷ್ಟನೆ ನೀಡಿರಲಿಲ್ಲ.

ಆದರೆ, ಗೌರವ್ ಗೊಗೊಯಿ ಅವರ ಬ್ರಿಟಿಷ್ ಪತ್ನಿ ಎಲಿಝಬೆತ್ ಕೋಲ್ಬರ್ನ್ ಅವರೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನದ ಪ್ರಜೆ ಅಲಿ ತೌಕೀರ್ ಶೇಖ್ ಎಂಬ ವ್ಯಕ್ತಿ ಭಾರತದಲ್ಲಿನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾನೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು ಅಸ್ಸಾಂ ಸರಕಾರ ಫೆಬ್ರವರಿ ತಿಂಗಳಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.

ಗೌರವ್ ಗೊಗೊಯಿ ಅವರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಹಿಮಂತ ಬಿಸ್ವ ಶರ್ಮ, ನನಗಾಗಲಿ ಅಥವಾ ನನ್ನ ಕುಟುಂಬಕ್ಕಾಗಲಿ ಪಾಕಿಸ್ತಾನದೊಂದಿಗೆ ಯಾವುದೇ ಸಂಪರ್ಕವಿಲ್ಲ ಹಾಗೂ ನೆರೆಯ ದೇಶದೊಂದಿಗೆ ಕಾಂಗ್ರೆಸ್ ಸಂಸದರು ಹೊಂದಿರುವ ಸಂಪರ್ಕದ ಕುರಿತು ಸಾರ್ವಜನಿಕ ತಾಣದಲ್ಲಿ ಸೂಕ್ತ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ, ಅದನ್ನು ಬಯಲುಗೊಳಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ.

“ನಾನಾಗಲಿ, ನನ್ನ ಪುತ್ರ ಮತ್ತು ಪುತ್ರಿಯಾಗಲಿ ಯಾವತ್ತೂ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಮುಂದುವರಿದು, ಪಾಕಿಸ್ತಾನದಿಂದ ವೇತನ ಅಥವಾ ಹಣಕಾಸು ನೆರವು ಪಡೆಯುವುದನ್ನು ನನ್ನ ಪತ್ನಿ ಹಾಗೂ ನನ್ನ ಇಡೀ ಕುಟುಂಬ ಎಂದೂ ಬಯಸುವುದಿಲ್ಲ” ಎಂದು ಅವರು ಛೇಡಿಸಿದ್ದಾರೆ.


ನನ್ನ ಪತಿ, ನನ್ನ ಪುತ್ರ ಹಾಗೂ ಪುತ್ರಿ ಸೇರಿದಂತೆ ನನ್ನ ಕುಟುಂಬದ ಸದಸ್ಯರೆಲ್ಲರೂ ಭಾರತೀಯ ನಾಗರಿಕರಾಗಿದ್ದು, ನನ್ನ ಯಾವ ಮಕ್ಕಳೂ ಭಾರತೀಯ ನಾಗರಿಕತ್ವವನ್ನು ಶರಣಾಗಿಸಿಲ್ಲ ಅಥವಾ ತ್ಯಜಿಸಿಲ್ಲ ಎಂದೂ ಘೋಷಿಸಿದ್ದಾರೆ.

ಈ ಕುರಿತು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪ ನಾಯಕರಾಗಿರುವ ಗೌರವ್ ಗೊಗೊಯಿ ಅವರ ಪ್ರತಿಕ್ರಿಯೆಯನ್ನು ಕೋರಿರುವ ಹಿಮಂತ ಬಿಸ್ವ ಶರ್ಮ, “ಸಂಬಂಧಿಸಿದ ಲೋಕಸಭಾ ಸಂಸದ ಹಾಗೂ ಅವರು ಪಾಕಿಸ್ತಾನದೊಂದಿಗೆ ಹೊಂದಿರುವ ಸಂಪರ್ಕಗಳ ಸೂಕ್ತ ಮಾಹಿತಿಗಳನ್ನು ಸಾರ್ವಜನಿಕ ತಾಣಗಳಲ್ಲಿ ಪ್ರಕಟಿಸುವ ಮೂಲಕ ಬಯಲುಗೊಳಿಸಲಾಗುವುದು. ಸೆಪ್ಟೆಂಬರ್ 10, 2025ರವರೆಗೆ ಕಾಯಿರಿ” ಎಂದು ಅವರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಈ ಪೋಸ್ಟ್ ಗೆ ಮತ್ತೊಮ್ಮೆ ತಿರುಗೇಟು ನೀಡಿರುವ ಗೌರವ್ ಗೊಗೊಯಿ, “ನನ್ನ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಿಲ್ಲ” ಎಂದು ವ್ಯಂಗ್ಯವಾಡಿದ್ದು, ತಮ್ಮ ಹಿಂದಿನ ಮೂರು ಪ್ರಶ್ನೆಗಳನ್ನು ಮತ್ತೆ ಪುನರಾವರ್ತಿಸಿದ್ದಾರೆ.

ತಮ್ಮ ಮೂರು ಪ್ರಶ್ನೆತಗಳ ಕೊನೆಯಲ್ಲಿ, “2026ರವರೆಗೂ ಕಾಯಿರಿ” ಎಂದು ಹೇಳುವ ಮೂಲಕ, ಮುಂದಿನ ವರ್ಷ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯತ್ತ ಬೊಟ್ಟು ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News