ಮಹಾರಾಷ್ಟ್ರ: ಮರಾಠಿ, ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಮೂರನೇ ಭಾಷೆಯಾಗಿ ಹಿಂದಿ ಕಡ್ಡಾಯ
Photo : indianexpress
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶೈಕ್ಷಣಿಕ ವರ್ಷ 2025-26ರಿಂದ ಅನುಷ್ಠಾನಗೊಳಿಸುವ ಯೋಜನೆಯನ್ನು ಮಹಾರಾಷ್ಟ್ರ ಸರಕಾರ ಬುಧವಾರ ಘೋಷಿಸಿದೆ.
ಈ ಯೋಜನೆ ಮರಾಠಿ ಹಾಗೂ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ 1ರಿಂದ 5ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸುತ್ತದೆ. ಈಗ ಶಾಲೆಗಳಲ್ಲಿರುವ ದ್ವಿಭಾಷಾ ಸೂತ್ರದ ಬದಲು ತ್ರಿಭಾಷಾ ನೀತಿ ಅನುಷ್ಠಾನಗೊಳ್ಳುತ್ತದೆ.
ಇಂಗ್ಲೀಷ್ ಹಾಗೂ ಮರಾಠಿ ಭಾಷೆ ಹೊರತುಪಡಿಸಿ ಇತರ ಭಾಷೆಗಳಲ್ಲಿ ಬೋಧಿಸುವ ಶಾಲೆಗಳು ಈಗಾಗಲೇ ಈ ತ್ರಿಭಾಷಾ ನೀತಿಯನ್ನು ಅನುಸರಿಸುತ್ತವೆ. ಯಾಕೆಂದರೆ, ತಮ್ಮ ಶಿಕ್ಷಣ ಮಾಧ್ಯಮ ಭಾಷೆಯೊಂದಿಗೆ ಇಂಗ್ಲೀಷ್ ಹಾಗೂ ಮರಾಠಿಯನ್ನು ಕಲಿಸಬೇಕಾಗಿದೆ.
ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಈ ನಿರ್ಣಯವು ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಶಿಫಾರಸು ಮಾಡಲಾದ 5+3+3+4 ವಿನ್ಯಾಸದ ರೂಪುರೇಷೆಯನ್ನು ವಿವರಿಸುತ್ತದೆ.
ಈ ವಿನ್ಯಾಸವು ಶಾಲಾ ಶಿಕ್ಷಣವನ್ನು ನಾಲ್ಕು ಹಂತಗಳಾಗಿ ವಿಭಾಗಿಸುತ್ತದೆ.
ಹಂತ 1 (ಅಡಿಪಾಯ) : ಮೂರು ವರ್ಷಗಳ ಪೂರ್ವ ಪ್ರಾಥಮಿಕ ಶಿಕ್ಷಣ, ಅದನ್ನು ಅನುಸರಿಸಿ ತರಗತಿ 1 ಹಾಗೂ 2
ಹಂತ 2 (ಪೂರ್ವಸಿದ್ಧತಾ) : 3ರಿಂದ 5ನೇ ತರಗತಿ ವರೆಗೆ
ಹಂತ 3 (ಮಧ್ಯಮ) : 6ರಿಂದ 8ನೇ ತರಗತಿ ವರೆಗೆ
ಹಂತ 4 (ಸೆಕೆಂಡರಿ) : 9ರಿಂದ 12ನೇ ತರಗತಿ ವರೆಗೆ
ಈ ನೂತನ ನೀತಿ ಈ ಹಿಂದಿನ 10+2+3 ವ್ಯವಸ್ಥೆಯ ಬದಲಿಗೆ 5+3+3+4 ಮಾದರಿಯನ್ನು ಜಾರಿಗೆ ತರುತ್ತದೆ. ಇದು ಮೂಲಭೂತ ಹಂತದಿಂದ ಉನ್ನತ ಮಟ್ಟದ ವರೆಗಿನ ಶಿಕ್ಷಣವನ್ನು ಒಳಗೊಳ್ಳುತ್ತದೆ. ಈ ನೀತಿಯನ್ನು ರಾಜ್ಯದಲ್ಲಿ ಕ್ರಮೇಣ ಜಾರಿಗೆ ತರಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ತುಷಾರ್ ಮಹಾಜನ್ ತಿಳಿಸಿದ್ದಾರೆ.