ಹಿಂದಿ ಹೇರಿಕೆ: ಫಡ್ನವೀಸ್ ನಿಲುವನ್ನು ಕೇಂದ್ರ ಒಪ್ಪುವುದೇ?: ಸ್ಟಾಲಿನ್ ಪ್ರಶ್ನೆ

ಎಮ್.ಕೆ. ಸ್ಟಾಲಿನ್ | PC : PTI
ಚೆನ್ನೈ: ಹಿಂದಿ ಹೇರಿಕೆ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರಕಾರದ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅನುಮೋದಿಸುತ್ತದೆಯೇ ಎಂದು ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಿ ಮಾತ್ರ ಕಡ್ಡಾಯ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟೀಕರಣ ನೀಡಿದ ಬಳಿಕ ಸ್ಟಾಲಿನ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ತ್ರಿಭಾಷಾ ಸೂತ್ರವನ್ನು ಸ್ಟಾಲಿನ್ ದೃಢವಾಗಿ ವಿರೋಧಿಸುತ್ತಿರುವುದನ್ನು ಸ್ಮರಿಸಬಹುದಾಗಿದೆ. ‘‘ಹಿಂದಿಯನ್ನು ತೃತೀಯ ಭಾಷೆಯಾಗಿ ಹೇರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿರುವುದನ್ನು ಮನಗಂಡ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರೆ ಫಡ್ನವೀಸ್, ರಾಜ್ಯದಲ್ಲಿ ಮರಾಠಿ ಮತ್ರ ಕಡ್ಡಾಯ ಎಂದು ಈಗ ಹೇಳುತ್ತಿದ್ದಾರೆ. ಹಿಂದಿಯೇತರ ಭಾಷೆಗಳನ್ನು ಆಡುವ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವುದರ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾದ ಬಳಿಕ ಅವರು ಹೆದರಿರುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ’’ ಎಂದು ಸ್ಟಾಲಿನ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
‘‘ಮಹಾರಾಷ್ಟ್ರದಲ್ಲಿ ಮರಾಠಿಯನ್ನು ಹೊರತುಪಡಿಸಿ ಯಾವುದೇ ಭಾಷೆಯು ರಾಷ್ಟ್ರೀಯ ಶಿಕ್ಷಣ ನೀತಿಯಡಿ ತೃತೀಯ ಭಾಷೆಯಾಗಿ ಕಡ್ಡಾಯವಲ್ಲ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿಯ ನಿಲುವನ್ನು ಕೇಂದ್ರ ಸರಕಾರವು ಅಧಿಕೃತವಾಗಿ ಅಂಗೀಕರಿಸುತ್ತದೆಯೇ ಎನ್ನುವುದನ್ನು ಗೌರವಾನ್ವಿತ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಬೇಕು. ಅಂಗೀಕರಿಸುತ್ತದೆಯಾದರೆ, ಎನ್‌ಇಪಿ ಅಡಿ ತೃತೀಯ ಭಾಷೆ ಬೋಧನೆ ಕಡ್ಡಾಯವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ ಸ್ಪಷ್ಟ ನಿರ್ದೇಶನವನ್ನು ಕೇಂದ್ರ ಸರಕಾರವು ಹೊರಡಿಸುವುದೇ?’’ ಎಂದು ಅವರು ಪ್ರಶ್ನಿಸಿದ್ದಾರೆ.