ಒಂದೇ ದಿನ 3 ಕೋಟಿ ಪ್ರಯಾಣಿಕರನ್ನು ಸಾಗಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ರೈಲ್ವೆ

Update: 2024-11-07 10:25 GMT

ಸಾಂದರ್ಭಿಕ ಚಿತ್ರ | PC : PTI

ಹೊಸದಿಲ್ಲಿ: 2024,ನ.4ರಂದು ಮೂರು ಕೋಟಿಗೂ ಅಧಿಕ ಪ್ರಯಾಣಿಕರನ್ನು ಸಾಗಿಸುವ ಮೂಲಕ ತಾನು ಐತಿಹಾಸಿಕ ಮೈಲಿಗಲ್ಲನ್ನು ದಾಖಲಿಸಿರುವುದಾಗಿ ಭಾರತೀಯ ರೈಲ್ವೆಯು ತಿಳಿಸಿದೆ. ರೈಲ್ವೆ ಜಾಲದ ಇತಿಹಾಸದಲ್ಲಿಯೇ ಇದು ಒಂದು ದಿನದಲ್ಲಿ ಅತಿ ಹೆಚ್ಚು ಪ್ರಯಾಣಿಕರ ಸಂಖ್ಯೆಯಾಗಿದೆ.

ದುರ್ಗಾ ಪೂಜೆ, ದೀಪಾವಳಿ ಮತ್ತು ಛತ್ ಪೂಜೆ ಸೇರಿದಂತೆ ಸಾಲುಸಾಲಾಗಿ ಹಬ್ಬಗಳು ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿವೆ.

ನ.4ರಂದು ರೈಲ್ವೆಯು 120.72 ಲಕ್ಷದಷ್ಟು ದಾಖಲೆ ಸಂಖ್ಯೆಯಲ್ಲಿ ದೂರ ಪ್ರಯಾಣದ ಪ್ರಯಾಣಿಕರನ್ನು ಮತ್ತು 180 ಲಕ್ಷ ಉಪನಗರ ಪ್ರಯಾಣಿಕರನ್ನು ಸಾಗಿಸಿತ್ತು. ಇದು ಈ ವರ್ಷದಲ್ಲಿ ಒಂದೇ ದಿನದಲ್ಲಿ ದಾಖಲಾದ ಅತ್ಯಂತ ಹೆಚ್ಚು ಪ್ರಯಾಣಿಕರ ಸಂಖ್ಯೆಯಾಗಿದೆ.

ಅ.1ರಿಂದ ನ.5ರ ನಡುವೆ ನಿಗದಿತ ರೈಲುಗಳ ಮೂಲಕ ಸುಮಾರು 6.85 ಕೋಟಿ ಜನರು ಬಿಹಾರ, ಪೂರ್ವ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗೆ ಪ್ರಯಾಣಿಸಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್‌ನಂತಹ ದೇಶಗಳ ಒಟ್ಟು ಜನಸಂಖ್ಯೆಗಿಂತ ಎರಡು ಪಟ್ಟು ಆಗಿದೆ ಎಂದು ಭಾರತೀಯ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.

ಛತ್ ಪೂಜೆ ಹಬ್ಬವು ಅಂತ್ಯಗೊಳ್ಳುವುದರೊಂದಿಗೆ ನ.8ರಿಂದ ಜನರು ತಮ್ಮ ಕೆಲಸದ ಸ್ಥಳಗಳಿಗೆ ವಾಪಸಾಗುವ ಹಿನ್ನೆಲೆಯಲ್ಲಿ ನಿರೀಕ್ಷಿತ ದಟ್ಟಣೆಯನ್ನು ನಿಭಾಯಿಸಲು ವಿಶೇಷ ರೈಲುಗಳನ್ನು ಪ್ರಕಟಿಸಲಾಗಿದೆ.

ನ.8ರಂದು ಸೂರ್ಯೋದಯದ ಬಳಿಕ ಛತ್‌ಪೂಜೆಯ ವಾಪಸಾತಿ ದಟ್ಟಣೆ ಆರಂಭವಾಗಲಿದ್ದು,ಭಾರೀ ಸಂಖ್ಯೆಯ ಪ್ರಯಾಣಿಕರನ್ನು ನಿರ್ವಹಿಸಲು 164 ವಿಶೇಷ ರೈಲುಗಳನ್ನು ನಿಯೋಜಿಸಲಾಗಿದೆ. ನ.9ರಂದು 160,ನ.10ರಂದು 161 ಮತ್ತು ನ.11ರಂದು 155 ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆಯು ಉದ್ದೇಶಿಸಿದೆ.

ಅ.1ರಿಂದ ನ.5ರವರೆಗೆ ಹಬ್ಬಗಳ ಋತುವಿನಲ್ಲಿ 36 ದಿನಗಳ ಅವಧಿಯಲ್ಲಿ 4,521 ವಿಶೇಷ ರೈಲುಗಳ ಮೂಲಕ 65 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಮೂಲಕ ರೈಲ್ವೆಯು ಗಮನಾರ್ಹ ಸಾಧನೆಯನ್ನು ಮಾಡಿದೆ. ದುರ್ಗಾ ಪೂಜೆ,ದೀಪಾವಳಿ ಮತ್ತು ಛತ್ ಪೂಜೆಯ ಸಂದರ್ಭಗಳಲ್ಲಿ ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಈ ವಿಶೇಷ ರೈಲುಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂದು ಹೇಳಿಕೆಯು ತಿಳಿಸಿದೆ.

ಅ.1ರಿಂದ ನ.30ರವರೆಗೆ ಹಬ್ಬಗಳ ಋತುವಿನಲ್ಲಿ ಪ್ರಯಾಣಿಕರ ಹೆಚ್ಚಿನ ಸಂಖ್ಯೆಯನ್ನು ನಿಭಾಯಿಸಲು ರೈಲ್ವೆಯು 7,724 ವಿಶೇಷ ರೈಲುಗಳನ್ನು ಪ್ರಕಟಿಸಿದ್ದು,ಇದು ಕಳೆದ ವರ್ಷಕ್ಕೆ (4,429) ಹೋಲಿಸಿದರೆ ಶೇ.73ರಷ್ಟು ಹೆಚ್ಚು.

ಛತ್ ಪೂಜೆಗಾಗಿ ಪ್ರಯಾಣಿಕರನ್ನು ತಮ್ಮ ಗಮ್ಯಸ್ಥಳಗಳಿಗೆ ತಲುಪಿಸಲು ಭಾರತೀಯ ರೈಲ್ವೆಯು ಕಳೆದ ನಾಲ್ಕು ದಿನಗಳಲ್ಲಿ ಪ್ರತಿದಿನ ಸರಾಸರಿ 175 ವಿಶೇಷ ರೈಲುಗಳನ್ನು ಓಡಿಸಿದೆ ಎಂದು ಹೇಳಿಕೆಯು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News