ಗೃಹ ಸಚಿವಾಲಯವು ರಾಜ್ಯಗಳೊಂದಿಗೆ ಅವುಗಳ ಭಾಷೆಗಳಲ್ಲಿಯೇ ಸಂವಹನ ನಡೆಸಲಿದೆ: ಅಮಿತ್ ಶಾ

ಅಮಿತ್ ಶಾ | PC : PTI
ಹೊಸದಿಲ್ಲಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿನ ತ್ರಿಭಾಷಾ ಸೂತ್ರದ ಕುರಿತು ವಿವಾದದ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಡಿಸೆಂಬರ್ ನಂತರ ತನ್ನ ಸಚಿವಾಲಯವು ರಾಜ್ಯಗಳೊಂದಿಗೆ ಅವುಗಳ ಭಾಷೆಗಳಲ್ಲಿಯೇ ಪತ್ರ ವ್ಯವಹಾರವನ್ನು ನಡೆಸಲಿದೆ ಎಂದು ಹೇಳಿದ್ದಾರೆ.
‘ಡಿಸೆಂಬರ್ನ ಬಳಿಕ ನಾನು ನಾಗರಿಕರು,ಮುಖ್ಯಮಂತ್ರಿಗಳು, ಸಚಿವರು ಮತ್ತು ಸಂಸದರೊಂದಿಗೆ ಅವರದೇ ಭಾಷೆಯಲ್ಲಿ ಪತ್ರ ವ್ಯವಹಾರವನ್ನು ನಡೆಸಲಿದ್ದೇನೆ ’ ಎಂದು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದ ಶಾ, ಇದು ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಡಲು ಭಾಷೆಯ ಹೆಸರಿನಲ್ಲಿ ವಿವಾದವನ್ನು ಸೃಷ್ಟಿಸುತ್ತಿರುವವರಿಗೆ ಬಲವಾದ ಉತ್ತರವಾಗಿದೆ ಎಂದರು.
ಭಾಷೆಯ ಕುರಿತು ದೇಶದಲ್ಲಿ ಸಾಕಷ್ಟು ವಿಭಜನೆಗಳಾಗಿವೆ ಮತ್ತು ಇದು ಇನ್ನು ಮುಂದೆ ನಡೆಯಬಾರದು ಎಂದು ಹೇಳಿದ ಶಾ,‘ಅವರೇನು ಹೇಳುತ್ತಿದ್ದಾರೆ? ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತಿದ್ದೇವೆ ಎಂದೇ? ಅದು ಹೇಗೆ ಸಾಧ್ಯ? ನಾನು ಗುಜರಾತಿಗೆ ಸೇರಿದ್ದೇನೆ,ನಿರ್ಮಲಾ ಸೀತಾರಾಮನ್ ತಮಿಳುನಾಡಿಗೆ ಸೇರಿದ್ದಾರೆ. ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುವುದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದರು.
ಪ್ರತಿಯೊಂದೂ ಭಾರತೀಯ ಭಾಷೆಯು ದೇಶದ ಸಂಪತ್ತು ಮತ್ತು ಹಿಂದಿ ಇತರ ಭಾಷೆಗಳೊಂದಿಗೆ ಸ್ಪರ್ಧೆಯಲ್ಲಿಲ್ಲ ಎಂದ ಅವರು,‘ಇದನ್ನು ನಾನು ಪದೇ ಪದೇ ಹೇಳಿದ್ದೇನೆ. ಹಿಂದಿ ಎಲ್ಲ ಭಾರತೀಯ ಭಾಷೆಗಳ ಮಿತ್ರನಾಗಿದೆ ’ ಎಂದರು.
ನೂತನ ಎನ್ಇಪಿ ಮತ್ತು ಅದರಡಿ ಪ್ರಸ್ತಾವಿತ ತ್ರಿಭಾಷಾ ಸೂತ್ರ ಜಾರಿಯ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ತಮಿಳುನಾಡು ಸರಕಾರದ ನಡುವೆ ಹಗ್ಗಜಗ್ಗಾಟದ ನಡೆಯುತ್ತಿರುವಾಗಲೇ ಶಾ ಅವರ ಈ ಹೇಳಿಕೆಗಳು ಹೊರಬಿದ್ದಿವೆ.