ಘೋರ ಅಪರಾಧವಲ್ಲದ ಪ್ರಕರಣಗಳ ಆರೋಪಿಗಳಿಗೆ ಗೃಹಬಂಧನ: ಒಡಿಶಾ ಚಿಂತನೆ

Update: 2023-08-29 02:46 GMT

ಭುವನೇಶ್ವರ: ಘೋರ ಅಪರಾಧವಲ್ಲದ ಪ್ರಕರಣಗಳಲ್ಲಿ ಆರೋಪಿಗಳಿಗೆ ಗೃಹಬಂಧನ ವಿಧಿಸಿ ಅವರ ಚಲನ ವಲನಗಳ ಮೇಲೆ ನಿಗಾ ಇಡಲು ಜಿಪಿಎಸ್ ಆಧರಿತ ಸಾಧನಗಳನ್ನು ಬಳಸುವ ಬಗ್ಗೆ ಒಡಿಶಾ ಸರ್ಕಾರ ಚಿಂತನೆ ನಡೆಸಿದೆ. ಕಾರಾಗೃಹಗಳಲ್ಲಿ ಸಾಮಥ್ರ್ಯಕ್ಕಿಂತ ಅಧಿಕ ಸಂಖ್ಯೆಯ ಕೈದಿಗಳಿರುವುದರಿಂದ ದಟ್ಟಣೆ ತಪ್ಪಿಸಲು ಮತ್ತು ಜೈಲುಗಳಲ್ಲಿ ಕೈದಿಗಳ ಮೇಲೆ ಸರ್ಕಾರ ದೊಡ್ಡ ಮೊತ್ತದ ವೆಚ್ಚ ಮಾಡುತ್ತಿರುವುದನ್ನು ತಪ್ಪಿಸುವ ಪ್ರಯತ್ನವಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.

ಈ ಟ್ರ್ಯಾಕಿಂಗ್ ಸಾಧನಕ್ಕೆ 10 ರಿಂದ 15 ಸಾವಿರ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದ್ದು, ಇದನ್ನು ಆರೋಪಿಯ ಪಾದಕ್ಕೆ ಅಳವಡಿಸಲಾಗುತ್ತದೆ ಹಾಗೂ ಇದನ್ನು ಯಾವುದೇ ಬಗೆಯಲ್ಲಿ ತಿರುಚಲು ಅವಕಾಶವಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ನಿಯೋಜಿತ ಪ್ರದೇಶ ಅಥವಾ ಸ್ಥಳವನ್ನು ಈ ಸಾಧನಕ್ಕೆ ಪ್ರೋಗ್ರಾಂ ಮಾಡಲಾಗಿರುತ್ತದೆ ಹಾಗೂ ವಿಚಾರಣಾಧೀನ ಕೈದಿ, ಅಧಿಕಾರ ನೀಡಲ್ಪಟ್ಟ ಗಡಿಯನ್ನು ದಾಟಿ ತೆರಳಿದರೆ ಪೊಲೀಸರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸುತ್ತದೆ. ಅಂಥ ಸಂದರ್ಭದಲ್ಲಿ ಕೈದಿಗಳಿಗೆ ನೀಡಿರುವ ಜಾಮೀನು ರದ್ದುಪಡಿಸಲಾಗುತ್ತದೆ ಎಂದು ಮೂಲಗಳು ವಿವರ ನೀಡಿವೆ.

ಈ ತಂತ್ರಜ್ಞಾನವನ್ನು ಜೈಲಿನ ಒಳಗಡೆ ಅಪಾಯಕಾರಿ ಅಪರಾಧಿಗಳ ಚಲನ ವಲನದ ಬಗ್ಗೆ ನಿಗಾ ಇಡಲೂ ಬಳಸಬಹುದಾಗಿದೆ.

"ಸಣ್ಣ ಪುಟ್ಟ ಅಪರಾಧ ಪ್ರಕರಣಗಳಲ್ಲಿನ, ಹಿಂಸಾತ್ಮಕವಲ್ಲದ ವಿಚಾರಣಾಧೀಣ ಕೈದಿಗಳನ್ನು ಜೈಲಿಗೆ ಕಳುಹಿಸದೇ ಗೃಹಬಂಧನದಲ್ಲೇ ಇರಿಸುವ ಬಗ್ಗೆ ತಂತ್ರಜ್ಞಾನವನ್ನು ಬಳಸುವ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ" ಎಂದು ಕಾರಾಗೃಹ ವಿಭಾಗದ ಮಹಾನಿರ್ದೇಶಕ ಮನೋಜ್ ಕುಮಾರ್ ಛಾಬ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News