ಇಸ್ರೇಲ್-ಹಮಾಸ್ ನಡುವೆ ಮಾನವೀಯ ಕದನ ವಿರಾಮ: ವಿಶ್ವಸಂಸ್ಥೆ ನಿರ್ಣಯ ಅಂಗೀಕಾರ

Update: 2023-10-28 17:07 GMT

Photo- PTI

ವಿಶ್ವಸಂಸ್ಥೆ: ಮಾನವೀಯ ನೆಲೆಯಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ತಕ್ಷಣವೇ ಕದನವಿರಾಮವನ್ನು ಏರ್ಪಡಿಸಲು ಹಾಗೂ ದಿಗ್ಬಂಧನದಲ್ಲಿರುವ ಗಾಝಾಪಟ್ಟಿಯಿಂದ ನೆರವು ಸಾಮಾಗ್ರಿಗಳ ಪೂರೈಕೆಗೆ ಮತ್ತು ನಾಗರಿಕ ರಕ್ಷಣೆಗೆ ಆಗ್ರಹಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಶುಕ್ರವಾರ ಬಹುಮತದೊಂದಿಗೆ ಅಂಗೀಕರಿಸಿತು.

ಅರಬ್ ರಾಷ್ಟ್ರಗಳು ಸಿದ್ಧಪಡಿಸಿದ ಈ ನಿರ್ಣಯದ ಪರವಾಗಿ 120 ಮತಗಳು ಬಿದ್ದವು. ಭಾರತ ಸೇರಿದಂತೆ 45 ರಾಷ್ಟ್ರಗಳು ಮತದಾನಕ್ಕೆ ಗೈರುಹಾಜರಾಗಿದ್ದವು. ಅಮೆರಿಕ, ಇಸ್ರೇಲ್ ಸೇರಿದಂತೆ 14 ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದವು. ಜೋರ್ಡಾನ್ ಈ ನಿರ್ಣಯವನ್ನು ಮತದಾನಕ್ಕೆ ಮಂಡಿಸಿತ್ತು.

ಆಸ್ಟ್ರೇಲಿಯ, ಕೆನಡ, ಜರ್ಮನಿ, ಜಪಾನ್, ಉಕ್ರೇನ್ ಹಾಗೂ ಬ್ರಿಟನ್ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದ ಇತರ ದೇಶಗಳಲ್ಲಿ ಒಳಗೊಂಡಿವೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದ ನಿರ್ಣಯವು ಪ್ರದೇಶದಲ್ಲಿ ಅಸ್ಥಿರತೆ ಹೆಚ್ಚುವುದನ್ನು ಹಾಗೂ ಹಿಂಸಾಚಾರ ಉಲ್ಬಣಿಸುವುದನ್ನು ತಡೆಯುವುದು ಮುಖ್ಯವಾದುದು ಎಂದು ಪ್ರತಿಪಾದಿಸಿದೆ. ಎಲ್ಲ ಪಕ್ಷಗಳೂ ಗರಿಷ್ಠ ಸಂಯಮವನ್ನು ವಹಿಸಬೇಕು ಹಾಗೂ ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗುವಂತೆ ಅವುಗಳ ಮೇಲೆ ಪ್ರಭಾವಬೀರಬೇಕೆಂದು ಆಗ್ರಹಿಸಿದೆ.

ಫೆಲೆಸ್ತೀನ್ ಪ್ರಜೆಗಳನ್ನು ಬಲವಂತದಿಂದ ಸ್ಥಳಾಂತರಿಸುವ ಪ್ರಯತ್ನಗಳನ್ನು ಕೂಡಾ ದೃಢವಾಗಿ ಖಂಡಿಸುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹೇಳಿದೆ,.

ಅಕ್ರಮವಾಗಿ ಬಂಧನದಲ್ಲಿರಿಸಿದ ಎಲ್ಲಾ ನಾಗರಿಕರನ್ನು ತಕ್ಷಣವೇ ಹಾಗೂ ನಿಶ್ಶರ್ತವಾಗಿ ಬಿಡುಗಡೆಗೊಳಿಸುವಂತೆಯೂ ಸಾಮಾನ್ಯಸಭೆಯು ಕರೆ ನೀಡಿದೆ.

ಆರಬ್ ರಾಷ್ಟ್ರಗಳು ಸಿದ್ಧುಪಡಿಸಿದ ಈ ನಿರ್ಣಯವು ಗಾಝಾದಲ್ಲಿ ತಕ್ಷಣವೇ ಕದನವಿರಾಮವನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದೆ. ಎಲ್ಲಾ ಬಗೆಯ ಹಿಂಸಾಚಾರಗಳ ಅಂತ್ಯಕ್ಕೆ ಕಾರಣವಾಗುವಂತಹ ಸುಸ್ಥಿರವಾದ ಮಾನವೀಯ ಕದನ ವಿರಾಮವೇರ್ಪಡಬೇಕಾಗಿದೆ ಎಂದು ಪ್ರತಿಪಾದಿಸಿದೆ.

ನಿರ್ಣಯವನ್ನು ವಿರೋಧಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಇಸ್ರೇಲ್ ರಾಯಭಾರಿ ಗಿಲಾಡ್ ಎರ್ಡಾನ್ ಅವರು, ‘‘ಕದನವಿರಾಮವು ಹಮಾಸ್‌ಗೆ ಮರುಶಸ್ತ್ರಸಜ್ಜಿತಗೊಳ್ಳಲು ಕಾಲಾವಕಾಶವನ್ನು ನೀಡುತ್ತದೆ. ಹೀಗೆ ಅವರು ಮತ್ತೊಮ್ಮೆ ಹತ್ಯಾಕಾಂಡ ನಡೆಸಬಹುದಾಗಿದೆ’’ ಎಂದು ಆತಂಕ ವ್ಯಕ್ತಪಡಿಸಿದರು.

ಕದನವಿರಾಮಕ್ಕೆ ಕರೆ ನೀಡುವಂತಹ ಯಾವುದೇ ಪ್ರಯತ್ನವು ಶಾಂತಿ ಸ್ಥಾಪನೆಯ ಪ್ರಯತ್ನವೆಂದು ಭಾವಿಸಬಾರದು. ಇಸ್ರೇಲ್‌ನ ಕೈಗಳನ್ನು ಕಟ್ಟಿಹಾಕುವ ಪ್ರಯತ್ನ ಇದಾಗಿದೆ. ಎಂದು ಅವರು ಹೇಳಿದರು.

ವಿಶ್ವಸಂಸ್ಥೆಯಲ್ಲಿನ ಫೆಲೆಸ್ತೀನ್ ರಾಯಭಾರಿ ರಿಯಾದ್ ಮನ್ಸೂರ್ ಮಾತನಾಡಿ, ಫೆಲೆಸ್ತೀನ್ ವಿಷಯದಲ್ಲಿ ಕೆಲವು ನಿರ್ದಿಷ್ಟ ದೇಶಗಳು ಸ್ಪಷ್ಟವಾದ ದ್ವಂದ್ವ ನಿಲುವನ್ನು ತಾಳಿವೆಯೆಂದು ಹೇಳಿದರು.

‘‘1 ಸಾವಿರ ಇಸ್ರೇಲಿಗಳ ಹತ್ಯೆಯಾದಾಗ ಅದು ಭಯಾನಕವೆಂದು ಹೇಳುವ ದೇಶಗಳು, ಪ್ರತಿ ದಿನವೂ ಸಾವಿರ ಫೆಲೆಸ್ತೀನಿಯರ ಹತ್ಯೆಯಾದಾಗ ಅದೇ ರೀತಿಯ ಆಕ್ರೋಶವನ್ನು ಯಾಕೆ ವ್ಯಕ್ತಪಡಿಸುವುದಿಲ್ಲ?. ಈ ಹತ್ಯಾಕಾಂಡವನ್ನು ತಕ್ಷಣವೇ ಕೊನೆಗೊಳಿಸಬೇಕಾದ ತುರ್ತು ಅಗತ್ಯವಿದೆಯೆಂದು ಅವು ಯಾಕೆ ಭಾವಿಸುವುದಿಲ್ಲ ಎಂದದು ಮನ್ಸೂರ್ ಪ್ರಶ್ನಿಸಿದರು.

ಮತದಾನಕ್ಕೆ ಮುನ್ನ ಜೋರ್ಡಾನ್‌ನ ವಿದೇಶಾಂಗ ಸಚಿವ ಆಯ್‌ಮಾನ್ ಸಫಾಇದ ಅವರು ಮಾತನಾಡಿ, ನಿರ್ಣಯದ ವಿರುದ್ಧ ಮತಚಲಾಯಿಸುವುದೆಂದರೆ, ವಿವೇಚನಾ ರಹಿತ ಯುದ್ದಕ್ಕೆ ಹಾಗೂ ವಿವೇಚನಾರಹಿತ ಹತ್ಯಾಕಾಂಡಕ್ಕೆ ಅನುಮೋದನೆ ನೀಡಿದಂತೆ ಎಂದು ಹೇಳಿದರು.

ಕೋಟ್ಯಂತರ ಮಂದಿ ಪ್ರತಿಯೊಂದು ಮತವನ್ನೂ ಗಮನಿಸುತ್ತಿದ್ದಾರೆ. ಇತಿಹಾಸವು ತೀರ್ಪು ನೀಡಲಿದೆ’’ ಎಂದು ಐಮಾನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿರ್ಣಯದಲ್ಲಿ ತಿದ್ದುಪಡಿ ಕೋರುವ ಕೆನಡದ ಪ್ರಯತ್ನ ವಿಫಲ; ತಿದ್ದುಪಡಿಯನ್ನು ಬೆಂಬಲಿಸಿದ ಭಾರತ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ ನಿರ್ಣಯದಲ್ಲಿ ತಿದ್ದುಪಡಿ ಮಾಡುವ ಕೆನಡ ನೇತೃತ್ವದ ಪ್ರಯತ್ನವು ವಿಫಲವಾಗಿದೆ. ‘ಹಮಾಸ್‌ನ ದಾಳಿಗಳು ಹಾಗೂ ಒತ್ತೆಯಾಳುಗಳನ್ನು ವಶಕ್ಕೆ ತೆಗೆದುಕೊಂಡಿರುವ ಕುರಿತಾದ ಖಂಡನೆಯನ್ನು ನಿರ್ಣಯದಲ್ಲಿ ಸೇರ್ಪಡೆಗೊಳಿಸಬೇಕೆಂದು ಈ ಕರಡು ನಿರ್ಣಯವು ಆಗ್ರಹಿಸಿತ್ತು. ನಿರ್ಣಯದ ತಿದ್ದುಪಡಿಗೆ ಮೂರನೆ ಎರಡರಷ್ಟು ಮತಗಳ ಅಗತ್ಯವಿರುತ್ತದೆ. ಆದರೆ ಭಾರತ ಸೇರಿದಂತೆ 88 ರಾಷ್ಟ್ರಗಳು ತಿದ್ದುಪಡಿ ನಿರ್ಣಯದ ಪರವಾಗಿ ಮತಚಲಾಯಿಸಿದ್ದವು. 55 ಮತಗಳು ನಿರ್ಣಯದ ವಿರುದ್ಧ ಚಲಾಯಿಸಲ್ಪಟ್ಟವು ಹಾಗೂ 23 ರಾಷ್ಟ್ರಗಳು ಗೈರುಹಾಜರಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News