ʼಪ್ರಧಾನಿ ಮೋದಿಯ ಕಾಶ್ಮೀರ ರ್‍ಯಾಲಿಗೆ ಸರಕಾರಿ ನೌಕರರನ್ನು ಕಳುಹಿಸಿʼ: ಇಲಾಖೆಗಳಿಗೆ ಸರಕಾರದ ಸೂಚನೆ

Update: 2024-03-05 11:20 GMT

Photo : ANI 

ಶ್ರೀನಗರ: ಜಮ್ಮು-ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಆಡಳಿತವು ಇಲ್ಲಿಯ ಬಕ್ಷಿ ಕ್ರೀಡಾಂಗಣದಲ್ಲಿ ಮಾ.7ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ರ್‍ಯಾಲಿಯಲ್ಲಿ ನೂರಾರು ಸರಕಾರಿ ನೌಕರರ ಭಾಗವಹಿಸುವಿಕೆಗಾಗಿ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು thehindu.com ವರದಿ ಮಾಡಿದೆ.

ತಮ್ಮ ಉದ್ಯೋಗಿಗಳನ್ನು ರ್‍ಯಾಲಿ ಸ್ಥಳಕ್ಕೆ ಕಳುಹಿಸುವಂತೆ ಶಿಕ್ಷಣ, ಕೃಷಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ 13 ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಉನ್ನತ ಅಧಿಕೃತ ಮೂಲಗಳು ತಿಳಿಸಿವೆ.

ರ್‍ಯಾಲಿಯಲ್ಲಿ ನಗರದಾದ್ಯಂತದ 62 ಬೇಕರಿಗಳ ಪ್ರತಿನಿಧಿಗಳ ಉಪಸ್ಥಿತಿಯನ್ನು ಖಚಿತ ಪಡಿಸಿಕೊಳ್ಳುವಂತೆ ಆಹಾರ ಸುರಕ್ಷತೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

13 ಇಲಾಖೆಗಳ ಸುಮಾರು 7,000 ಉದ್ಯೋಗಿಗಳು ಪ್ರಧಾನಿಯವರ ರ್‍ಯಾಲಿಗೆ ಹಾಜರಾಗಲಿದ್ದಾರೆ ಎಂದು ಮಾಧ್ಯಮಗಳಿಗೆ ಲಭ್ಯವಾಗಿರುವ ಪಟ್ಟಿಯೊಂದು ಸೂಚಿಸಿದೆ.

ಭದ್ರತೆಯ ದೃಷ್ಟಿಯಿಂದ ಪ್ರಧಾನಿಯವರ ರ್‍ಯಾಲಿಯಲ್ಲಿ ಭಾಗವಹಿಸಲಿರುವ ಈ ಸರಕಾರಿ ಉದ್ಯೋಗಿಗಳ ಪರಿಶೀಲನೆಯನ್ನು ಪರಿಶೀಲಿಸಲಾಗುತ್ತಿದೆ.

‘ಭದ್ರತಾ ಏಜೆನ್ಸಿಗಳು ನಮ್ಮ ಬಾಳಸಂಗಾತಿಗಳ ಮತ್ತು ಕುಟುಂಬ ಸದಸ್ಯರ ವಿವರಗಳನ್ನೂ ಪಡೆದುಕೊಂಡಿವೆ. ನಮಗೆ ಉಗ್ರವಾದಿಗಳೊಂದಿಗೆ ಸಂಪರ್ಕವೇನಾದರೂ ಇತ್ತೇ ಎಂದೂ ಅವು ಪ್ರಶ್ನಿಸಿದ್ದವು’ ಎಂದು ಸರಕಾರಿ ಉದ್ಯೋಗಿಯೋರ್ವರು thehindu.com ಗೆ ತಿಳಿಸಿದ್ದಾರೆ.

‘ರ್ಯಾಲಿಯಲ್ಲಿ ನಾವು ಭಾಗವಹಿಸುವ ಅಗತ್ಯವಾದರೂ ಏನಿದೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಸರಕಾರಿ ಶಾಲೆಯೊಂದರ ಶಿಕ್ಷಕರೋರ್ವರು ಹೇಳಿದರು.

‘ಬೆಳಿಗ್ಗೆ ನಾಲ್ಕು ಗಂಟೆಗೆ ಶಾಲಾ ಆವರಣದಲ್ಲಿ ಹಾಜರಿರುವಂತೆ ನಮಗೆ ಸೂಚಿಸಲಾಗಿದೆ. ಅಲ್ಲಿಂದ ರ್‍ಯಾಲಿ ನಡೆಯುವ ಸ್ಥಳಕ್ಕೆ ನಮ್ಮನ್ನು ಕರೆದೊಯ್ಯಲಾಗುತ್ತದೆ. ತಿಂಡಿತಿನಿಸುಗಳನ್ನು ತರದಂತೆ ಕಟ್ಟುನಿಟ್ಟಾದ ನಿರ್ದೇಶನವನ್ನು ನೀಡಲಾಗಿದೆ. ಮೊಬೈಲ್ ಫೋನ್ ಹೊರತುಪಡಿಸಿ ಇತರ ಯಾವುದೇ ಬ್ಯಾಗ್‌ಗಳನ್ನು ನಾವು ಒಯ್ಯುವಂತಿಲ್ಲ ’ ಎಂದು ಇನ್ನೋರ್ವ ಶಿಕ್ಷಕರು ತಿಳಿಸಿದರು.

ಇದು 2019ರಲ್ಲಿ ಸಂವಿಧಾನದ ವಿಧಿ 370ರ ರದ್ದತಿಯ ಬಳಿಕ ಕಾಶ್ಮೀರ ಕಣಿವೆಗೆ ಪ್ರಧಾನಿಯವರ ಮೊದಲ ಭೇಟಿಯಾಗಿದೆ. ಕಳೆದ ಮೂರು ವಾರಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಎರಡನೇ ಭೇಟಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News