ನಾನು ಭಾರತದ ಸೊಸೆ, ನನಗೆ ಇಲ್ಲಿರಲು ಬಿಡಿ: ಗಡಿಪಾರು ಭೀತಿಯಲ್ಲಿರುವ ಸೀಮಾ ಹೈದರ್ ಮನವಿ

Update: 2025-04-26 21:45 IST
ನಾನು ಭಾರತದ ಸೊಸೆ, ನನಗೆ ಇಲ್ಲಿರಲು ಬಿಡಿ: ಗಡಿಪಾರು ಭೀತಿಯಲ್ಲಿರುವ ಸೀಮಾ ಹೈದರ್ ಮನವಿ

ಸೀಮಾ ಹೈದರ್ | PC : X 

  • whatsapp icon

ನೋಯ್ಡಾ: ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ಸರಣಿ ಪ್ರತೀಕಾರದ ಕ್ರಮಗಳ ಭಾಗವಾಗಿ ಸರಕಾರ ಪಾಕಿಸ್ತಾನಿ ಪ್ರಜೆಗಳ ವೀಸಾ ಸೇವೆಯನ್ನು ರದ್ದುಗೊಳಿಸಿದ ಬಳಿಕ ಗಡಿಪಾರಿಗೆ ಒಳಗಾಗುವ ಭೀತಿಯಲ್ಲಿರುವ ಸೀಮಾ ಹೈದರ್, ‘‘ನಾನು ಪಾಕಿಸ್ತಾನದ ಮಗಳು. ಆದರೆ, ಈಗ ಭಾರತದ ಸೊಸೆ’’ ಎಂದು ಹೇಳಿದ್ದಾರೆ.

ಭಾರತದ ತನ್ನ ಪ್ರಿಯಕರ ಸಚಿನ್ ಮೀನಾನನ್ನು ವಿವಾಹವಾಗಲು ಪಾಕಿಸ್ತಾನ ತ್ಯಜಿಸುವ ಮೂಲಕ ಸೀಮಾ ಹೈದರ್ 2023ರಲ್ಲಿ ಭಾರೀ ಸುದ್ದಿಯಾಗಿದ್ದರು. ಆಕೆ ಅದಾಗಲೇ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವಿವಾಹವಾಗಿದ್ದಳು. ಆದರೆ, ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಳು.

ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಸೀಮಾ, ‘‘ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ಭಾರತದಲ್ಲಿಯೇ ಇರಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ (ಆದಿತ್ಯನಾಥ್) ಅವರಲ್ಲಿ ಮನವಿ ಮಾಡುತ್ತೇನೆ. ಸಚಿನ್ ಮೀನಾ ಅವರನ್ನು ವಿವಾಹವಾದ ಬಳಿಕ ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ’’ ಎಂದು ಹೇಳಿದ್ದಾರೆ.

‘‘ಸೀಮಾ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲ. ಆಕೆ, ಗ್ರೇಟರ್ ನೋಯ್ಡಾದ ನಿವಾಸಿ ಸಚಿನ್ ಮೀನಾರನ್ನು ವಿವಾಹವಾಗಿದ್ದಾರೆ. ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರ ಪೌರತ್ವ ಈಗ ಅವರ ಭಾರತೀಯ ಪತಿಯೊಂದಿಗೆ ಸಂಪರ್ಕ ಹೊಂದಿದೆ. ಆದುದರಿಂದ ಕೇಂದ್ರ ಸರಕಾರದ ನಿರ್ದೇಶನ ಅವರಿಗೆ ಅನ್ವಯವಾಗುವುದಿಲ್ಲ’’ ಎಂದು ಸೀಮಾ ಅವರ ನ್ಯಾಯವಾದಿ ಎ.ಪಿ. ಸಿಂಗ್ ಗುರುವಾರ ತಿಳಿಸಿದ್ದಾರೆ.

‘‘ನಾನು ಈಗ ನಿಮ್ಮ ನಿರಾಶ್ರಿತಳಾಗಿದ್ದೇನೆ ಎಂದು ನಾನು ಮೋದಿಜಿ ಹಾಗೂ ಯೋಗಿ ಜಿ ಅವರಲ್ಲಿ ಮನವಿ ಮಾಡುತ್ತೇನೆ. ನಾನು ಪಾಕಿಸ್ತಾನದ ಮಗಳು. ಆದರೆ, ಭಾರತದ ಸೊಸೆ. ನನಗೆ ಇಲ್ಲಿ ಇರಲು ಅವಕಾಶ ನೀಡಿ’’ ಎಂದು ಹೈದರ್ ವೀಡಿಯೊದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News