ಕೃಷಿ ಕಾಯ್ದೆ ಕುರಿತ ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್
ಹೊಸದಿಲ್ಲಿ: ಕೃಷಿ ಕಾಯ್ದೆಗಳನ್ನು ಮರಳಿ ಜಾರಿಗೆ ತರಬೇಕು ಹಾಗೂ ರೈತರೇ ಈ ಕಾಯ್ದೆಗಳಿಗಾಗಿ ಆಗ್ರಹಿಸಬೇಕು ಎಂದು ತಾನು ನೀಡಿದ್ದ ಹೇಳಿಕೆಗೆ ಕ್ಷಮೆಯಾಚಿಸಿರುವ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಈ ಕುರಿತು ವಿಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಂಗನಾ ರಣಾವತ್, ನನ್ನ ಹೇಳಿಕೆಯಿಂದ ಅನೇಕರಿಗೆ ಅಸಮಾಧಾನವಾಗಿದೆ ಎಂದು ಹೇಳಿದ್ದಾರೆ.
“ನಾನು ಕೇವಲ ಕಲಾವಿದೆಯಲ್ಲ ಬದಲಿಗೆ ಬಿಜೆಪಿ ಕಾರ್ಯಕರ್ತೆ ಎಂಬುದು ನನಗೆ ತಿಳಿದಿರಬೇಕಿದೆ. ನನ್ನ ಅನಿಸಿಕೆಗಳು ಪಕ್ಷದ ನಿಲುವಾಗಿರಬೇಕೇ ಹೊರತು ವೈಯಕ್ತಿಕವಾಗಿರಕೂಡದು. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಮತ್ತು ನನ್ನ ಹೇಳಿಕೆಯಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ, ಅದನ್ನು ಹಿಂಪಡೆಯುತ್ತೇನೆ” ಎಂದೂ ಹೇಳಿದ್ದಾರೆ.
ಕೃಷಿ ಕಾಯ್ದೆಗಳನ್ನು ಮರಳಿ ಜಾರಿಗೆ ತರಬೇಕು ಎಂಬ ಕಂಗನಾ ರಣಾವತ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ಅದು ಅವರ ವೈಯಕ್ತಿಕ ಹೇಳಿಕೆ ಎಂದು ಸಮಜಾಯಿಷಿ ನೀಡಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, "ಕಂಗನಾ ರಾವತ್ ವಿಡಿಯೊ ವೈರಲ್ ಆಗಿದೆ. ಕೃಷಿ ಕಾನೂನುಗಳ ಬಗ್ಗೆ ಅವರು ಹಾಗೆ ಮಾತನಾಡಬಾರದಿತ್ತು. ಪಕ್ಷದ ಪರವಾಗಿ ಮಾತನಾಡುವ ಅಧಿಕಾರ ಅವರಿಗಿಲ್ಲ. ಅವರ ಅಭಿಪ್ರಾಯಗಳು ವೈಯಕ್ತಿಕ. ಈ ವಿಚಾರದಲ್ಲಿ ಪಕ್ಷದ ನಿಲುವು ಅಲ್ಲ" ಎಂದು ಸ್ಪಷ್ಟನೆ ನೀಡಿದ್ದರು.
2020ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ರೈತರಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು.
Do listen to this, I stand with my party regarding Farmers Law. Jai Hind pic.twitter.com/wMcc88nlK2
— Kangana Ranaut (@KanganaTeam) September 25, 2024