34 ವರ್ಷಗಳ ವೃತ್ತಿ ಜೀವನದಲ್ಲಿ 57 ಬಾರಿ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಇಂದು ನಿವೃತ್ತಿ

ಅಶೋಕ್ ಖೇಮ್ಕಾ (Photo credit: indiatoday.in)
ಚಂಡೀಗಢ: ಸುಮಾರು 34 ವರ್ಷಗಳ ವೃತ್ತಿಜೀವನದಲ್ಲಿ 57 ಬಾರಿ ವರ್ಗಾವಣೆಗೊಂಡಿದ್ದ ಹಾಗೂ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಬುಧವಾರ ನಿವೃತ್ತರಾಗಲಿದ್ದಾರೆ.
ಡಿಸೆಂಬರ್ 2024 ರಲ್ಲಿ ಕೊನೆಯ ಬಾರಿ ವರ್ಗಾವಣೆಯಾಗಿದ್ದ ಅವರನ್ನು ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರಸ್ತುತ ಅವರು ಇದೇ ಹುದ್ದೆಯಲ್ಲಿ ನಿವೃತ್ತರಾಗಲಿದ್ದಾರೆ.
ಹರ್ಯಾಣ ಕೇಡರ್‌ನ 1991 ರ ಬ್ಯಾಚ್ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು, 2012 ರಲ್ಲಿ ರಾಬರ್ಟ್ ವಾದ್ರಾ ಅವರಿಗೆ ಸಂಬಂಧಿಸಿದ ಗುರುಗ್ರಾಮ್ ಭೂ ಒಪ್ಪಂದದ ರೂಪಾಂತರವನ್ನು (ಮಾಲಕತ್ವವನ್ನು ವರ್ಗಾಯಿಸುವ ಪ್ರಕ್ರಿಯೆ) ರದ್ದುಗೊಳಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
ಎಪ್ರಿಲ್ 30, 1965 ರಂದು ಕೋಲ್ಕತ್ತಾದಲ್ಲಿ ಜನಿಸಿದ ಅವರು 1988 ರಲ್ಲಿ ಐಐಟಿ ಖರಗ್‌ಪುರದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದಿದ್ದು, ನಂತರ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮತ್ತು ವ್ಯವಹಾರ ಆಡಳಿತ ಮತ್ತು ಹಣಕಾಸು ವಿಷಯದಲ್ಲಿ ವಿಶೇಷ ಎಂಬಿಎ ಪದವಿಯನ್ನು ಪಡೆದಿದ್ದಾರೆ. ಅಲ್ಲದೇ, ಸೇವೆಯಲ್ಲಿರುವಾಗಲೇ ಅವರು ಪಂಜಾಬ್ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿಯನ್ನೂ ಪೂರ್ಣಗೊಳಿಸಿದ್ದರು.