“ಬಿಜೆಪಿ ಬಟನ್ ಒತ್ತಿದರೆ ಇಟಲಿಯಲ್ಲಿ ಶಾಕ್‌ ಆಗಬೇಕು”: ಅಮಿತ್ ಶಾ

Update: 2023-11-11 16:59 GMT

 ಅಮಿತ್ ಶಾ  Photo- PTI

ಗಂಧ್ವಾನಿ (ಮಧ್ಯಪ್ರದೇಶ): “ಬಿಜೆಪಿ ಗುಂಡಿಯನ್ನು ಎಷ್ಟು ಬಲವಾಗಿ ಒತ್ತಬೇಕೆಂದರೆ, ಅದರ ವಿದ್ಯುದಾಘಾತವು ಇಟಲಿಗೆ ಅನುಭವವಾಗಬೇಕು” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರದೇಶದ ಮತದಾರರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ಮತ್ತು ವಂಶಾಡಳಿತ ರಾಜಕಾರಣವನ್ನು ಬಿತ್ತುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಚುನಾವಣಾ ರಾಜ್ಯವಾದ ಮಧ್ಯಪ್ರದೇಶದಲ್ಲಿನ ಮನಾವರ್, ಬದ್ನಾವರ್, ಘಾರ್ ಹಾಗೂ ದೇಪಲ್ ಪುರ್ ನಲ್ಲಿ ಹಲವಾರು ಸಮಾವೇಶಗಳು ಹಾಗೂ ರಸ್ತೆ ಪ್ರದರ್ಶನಗಳಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

“ಈ ಚುನಾವಣೆಯು ಕೇವಲ ಶಾಸಕನನ್ನು ಚುನಾಯಿಸುವ ಕುರಿತಾದದ್ದಲ್ಲ. ಬದಲಿಗೆ ಈ ಚುನಾವಣೆಯು ಭಾರತ ಮತ್ತು ಮಧ‍್ಯಪ್ರದೇಶದ ಹಣೆಬರಹವನ್ನು ನಿರ್ಧರಿಸುವ ಕುರಿತಾದದ್ದಾಗಿದೆ. ಈ ಚುನಾವಣೆಯು ಮುಂದಿನ ಐದು ವರ್ಷಗಳ ಕಾಲ ಮಧ್ಯಪ್ರದೇಶ ಮತ್ತು ಭಾರತದ ಚುಕ್ಕಾಣಿಯು ರಾಹುಲ್ ಗಾಂಧಿಯವರ ಕಾಂಗ್ರೆಸ್ ಕೈನಲ್ಲಿರುತ್ತದೊ ಅಥವಾ ಮೋದಿಯ ಬಿಜೆಪಿ ಕೈಯಲ್ಲಿರುತ್ತದೊ ಎಂಬುದನ್ನು ನಿರ್ಧರಿಸಲಿದೆ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್ ಹಾಗೂ ಕಮಲ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಅವರು ರಾಜ್ಯವನ್ನು ಹಾಳುಗೆಡವುತ್ತಿದ್ದು, ಮಧ‍್ಯಪ್ರದೇಶವನ್ನು ‘ಬಿಮಾರು’ ರಾಜ್ಯ ಎಂದು ಕರೆಯಲಾಗುತ್ತಿದ್ದ ಕರಾಳ ಯುಗಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

“ಕಳೆದ 18 ವರ್ಷಗಳಲ್ಲಿ ಬಿಜೆಪಿಯು ರಾಜ್ಯದಲ್ಲಿ ಪರಿವರ್ತನೀಯ ಬದಲಾವಣೆಯನ್ನು ತಂದಿದೆ. ಒಂದು ಕೈಯಲ್ಲಿ 53 ವರ್ಷಗಳ ಅವಧಿಯ ಆಡಳಿತ ನಡೆಸಿರುವ ಕಾಂಗ್ರೆಸ್ ಇದ್ದರೆ, ಮತ್ತೊಂದು ಕೈಯಲ್ಲಿ 18 ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿಯಿದೆ” ಎಂದು ಅವರು ಮತದಾರರೆದುರು ಆಯ್ಕೆಯನ್ನು ಇಟ್ಟಿದ್ದಾರೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಗೆ ನ. 17ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News