ಪ್ರಧಾನಿ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ಸೇವಿಸಬಹುದಾದರೆ, ಭಾರತದ ಕ್ರಿಕೆಟ್ ತಂಡ ಯಾಕೆ ಹೋಗಬಾರದು?: ತೇಜಸ್ವಿ ಯಾದವ್ ವ್ಯಂಗ್ಯ
ಪಾಟ್ನಾ: ಕ್ರೀಡೆಗಳಿಂದ ರಾಜಕೀಯವನ್ನು ದೂರ ಇಡಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿ, ಬಿರಿಯಾನಿ ಸೇವಿಸಬಹುದಾದರೆ, ಭಾರತ ತಂಡವೇಕೆ ಬಹುರಾಷ್ಟ್ರಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳಬಾರದು ಎಂದು ಅವರು ಪ್ರಶ್ನಿಸಿದ್ದಾರೆ.
ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತನ್ನ ಕ್ರಿಕೆಟ್ ತಂಡವನ್ನು ಕಳಿಸದಿರುವ ಭಾರತದ ನಿರ್ಧಾರದ ಸುತ್ತ ರಾಜಕೀಯ ವಿವಾದ ಭುಗಿಲೆದ್ದಿದೆ.
“ಕ್ರೀಡೆಯಲ್ಲಿ ಎಂದಿಗೂ ರಾಜಕೀಯ ಇರಬಾರದು. ಅವರು (ಪಾಕಿಸ್ತಾನ ತಂಡ) ನಮ್ಮ ದೇಶಕ್ಕೆ ಬರಬೇಕು ಹಾಗೂ ನಮ್ಮ ಆಟಗಾರರು ಅಲ್ಲಿಗೆ ಹೋಗಬೇಕು. ಕ್ರೀಡೆಯಲ್ಲಿ ಯಾವ ಸಮಸ್ಯೆಯಿದೆ? ಕ್ರೀಡೆಯಲ್ಲೇನೂ ಯುದ್ಧ ನಡೆಯುವುದಿಲ್ಲ. ಭಾರತ ತಂಡವೇಕೆ ಪಾಕಿಸ್ತಾನಕ್ಕೆ ಹೋಗಬಾರದು? ಒಂದು ವೇಳೆ ಬಿರಿಯಾನಿ ಸೇವಿಸಲು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋದರೆ, ಅದನ್ನು ಒಳ್ಳೆಯ ವಿಷಯವೆಂದು ಪರಿಗಣಿಸಲಾಗುತ್ತದೆ. ಆದರೆ, ಭಾರತ ತಂಡವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಅದನ್ನು ತಪ್ಪು ಎಂದು ಭಾವಿಸಲಾಗುತ್ತದೆ. ಇದು ಸರಿಯಾದ ಯೋಚನಾ ಕ್ರಮವಲ್ಲ” ಎಂದು ರಾಜ್ಯ ಮಟ್ಟದ ಕ್ರಿಕೆಟ್ ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸಿದ್ದ ತೇಜಸ್ವಿ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
2015ರಲ್ಲಿ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಝ್ ಶರೀಫ್ ರ ಜನ್ಮದಿನದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಅಚ್ಚರಿಯ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯನ್ನು ಉಲ್ಲೇಖಿಸಿ ತೇಜಸ್ವಿ ಯಾದವ್ ಮೇಲಿನಂತೆ ಹೇಳಿಕೆ ನೀಡಿದ್ದಾರೆ.
2008ರಲ್ಲಿ ನಡೆದಿದ್ದ ಏಶ್ಯಕಪ್ ಗಾಗಿ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. 2012-13ರಲ್ಲಿ ಭಾರತದಲ್ಲಿ ನಡೆದಿದ್ದ ದ್ವಿಪಕ್ಷೀಯ ಸರಣಿಯಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳು ಮುಖಾಮುಖಿಯಾಗಿದ್ದವು. ಇದಾದ ನಂತರ, ಉಭಯ ದೇಶಗಳ ನಡುವಿನ ರಾಜಕೀಯ ಬಾಂಧವ್ಯ ಹದಗೆಟ್ಟಿದ್ದರಿಂದ, ಇಲ್ಲಿಯವರೆಗೆ ಎರಡೂ ತಂಡಗಳು ಐಸಿಸಿ ಟೂರ್ನಮೆಂಟ್ ಗಳಲ್ಲಿ ಮಾತ್ರ ಪರಸ್ಪರ ಎದುರಾಗುತ್ತಿವೆ.