ಹಣ ಅಕ್ರಮ ವರ್ಗಾವಣೆ ಪ್ರಕರಣ | ಈಡಿಯಿಂದ ಜಾರ್ಖಂಡ್ ಸಚಿವ ಆಲಂಗಿರ್ ಆಲಂ ಬಂಧನ
ರಾಂಚಿ : ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರ್ಖಂಡ್ ಸಚಿವ ಹಾಗೂ ಕಾಂಗ್ರೆಸ್ ನಾಯಕ ಅಲಂಗಿರ್ ಆಲಂ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಬುಧವಾರ ಬಂಧಿಸಿದೆ.
ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯ(ಈಡಿ)ದ ವಲಯ ಕಚೇರಿಯಲ್ಲಿ ಎರಡನೇ ದಿನವಾದ ಬುಧವಾರ ಕೂಡ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್ಎ)ಯ ನಿಯಮಗಳ ಅಡಿಯಲ್ಲಿ ಆಲಂ ಅವರನ್ನು ಜಾರಿ ನಿರ್ದೇಶನಾಲಯ(ಈಡಿ) ಕಸ್ಟಡಿಗೆ ತೆಗೆದುಕೊಂಡಿತು.
ಕಳೆದ ವಾರ ಆಲಂ ಅವರ ಆಪ್ತ ಕಾರ್ಯದರ್ಶಿ ಹಾಗೂ ರಾಜ್ಯ ಆಡಳಿತ ಸೇವಾ ಅಧಿಕಾರಿ ಸಂಜೀವ್ ಕುಮಾರ್ ಲಾಲ್ (52) ಹಾಗೂ ಲಾಲ್ ಅವರ ಮನೆ ಕೆಲಸದಾಳು ಜಹಾಂಗೀರ್ ಆಲಂ (42) ಅವರು ನಂಟು ಹೊಂದಿದ ಫ್ಲ್ಯಾಟ್ನಿಂದ 32 ಕೋಟಿ ರೂ.ಗೂ ಅಧಿಕ ನಗದನ್ನು ವಶಪಡಿಸಿಕೊಂಡಿಸಿತ್ತು. ಬಳಿಕ ಜಾರಿ ನಿರ್ದೇಶನಾಲಯ(ಈಡಿ) ಅವರಿಬ್ಬರನ್ನು ಬಂಧಿಸಿತ್ತು.
ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭ್ರಷ್ಟಾಚಾರ ಹಾಗೂ ಲಂಚ ಪಾವತಿಸಿದ ಆರೋಪಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ತನಿಖೆಯನ್ನು ಜಾರಿ ನಿರ್ದೇಶನಾಲಯ(ಈಡಿ) ನಡೆಸುತ್ತಿದೆ.