ಕಳೆದ ವರ್ಷ ವಿವಿಧ ರಾಜ್ಯಗಳಿಗೆ 162 ಭೇಟಿಗಳನ್ನು ನೀಡಿದ್ದ ಪ್ರಧಾನಿ ಮೋದಿ ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ

Update: 2024-05-04 12:40 GMT

Missing posters, allegedly in Manipur. Photo: Twitter/@ashoswai

ಹೊಸದಿಲ್ಲಿ: ಸೂಕ್ಷ್ಮ ಗಡಿರಾಜ್ಯವಾಗಿರುವ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದು ನಿನ್ನೆಗೆ ಒಂದು ವರ್ಷ ಪೂರ್ತಿಗೊಂಡಿದೆ. ಈ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆಯೂ ಈ ಪ್ರಕ್ಷುಬ್ಧ ರಾಜ್ಯಕ್ಕೆ ಭೇಟಿ ನೀಡಲಿಲ್ಲ,ಆದರೆ ದೇಶದಲ್ಲಿಯ ವಿವಿಧ ರಾಜ್ಯಗಳಿಗೆ 162 ಅಧಿಕೃತ ಮತ್ತು ಅನಧಿಕೃತ ಭೇಟಿ ನೀಡಿದ್ದಾರೆ ಎಂದು thewire.in ವರದಿ ಮಾಡಿದೆ

ಮಣಿಪುರವು ಹೊತ್ತಿ ಉರಿಯುತ್ತಿದ್ದಾಗ ಮೋದಿ 14 ವಿದೇಶ ಪ್ರವಾಸಗಳನ್ನೂ ಮಾಡಿದ್ದರು. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಲ್ಲಿ 230ಕ್ಕೂ ಅಧಿಕ ಜನರು ಮೃತಪಟ್ಟಿದ್ದು, 60,000ಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದು, ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ತನ್ನ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅವರ ಅಥವಾ ಇತರ ಯಾವುದೇ ಸಚಿವರ ವಿರುದ್ಧ ಕ್ರಮಗಳು ನಡೆದಿಲ್ಲ.

ಮೋದಿ ಮಣಿಪುರಕ್ಕೆ ಭೇಟಿ ನೀಡದಿರುವುದನ್ನು ಪ್ರತಿಪಕ್ಷಗಳು ಪ್ರಶ್ನಿಸಿವೆ. ಕಳೆದ ವರ್ಷ ಹಿಂಸಾಚಾರದಿಂದ ಮಣಿಪುರ ತತ್ತರಿಸಿದ್ದಾಗ ರಾಜ್ಯಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಈ ವರ್ಷ ತನ್ನ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಮಣಿಪುರದಿಂದಲೇ ಆರಂಭಿಸಿದ್ದರು.

ಪ್ರಧಾನಿ ಕಚೇರಿಯ ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳಂತೆ ಮೇ 2023 ಮತ್ತು ಎಪ್ರಿಲ್ 2024ರ ನಡುವೆ ಮೋದಿಯವರು ರಾಜಸ್ಥಾನಕ್ಕೆ ಗರಿಷ್ಠ,24 ಭೇಟಿಗಳನ್ನು ನೀಡಿದ್ದರು. ಅವರು ಮಧ್ಯಪ್ರದೇಶಕ್ಕೂ 22 ಸಲ ಭೇಟಿಗಳನ್ನು ನೀಡಿದ್ದರು. ಕಳೆದ ವರ್ಷದ ಜನವರಿಯಲ್ಲಿ ಇವರೆಡೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದ್ದು,ಮೋದಿ ಬಿಜೆಪಿಗಾಗಿ ವ್ಯಾಪಕ ಪ್ರಚಾರ ನಡೆಸಿದ್ದರು.

ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡಾಗ ಮೋದಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿದ್ದರು. ಕಳೆದೊಂದು ವರ್ಷದಲ್ಲಿ ಅವರು ಎಂಟು ಸಲ ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆ. ತವರು ರಾಜ್ಯ ಗುಜರಾತಿಗೂ 10 ಸಲ ಭೇಟಿಗಳನ್ನು ನೀಡಿದ್ದ ಮೋದಿ ಲೋಕಸಭೆಗೆ ಗರಿಷ್ಠ ಸಂಖ್ಯೆಯಲ್ಲಿ ಸಂಸದರನ್ನು ಕಳುಹಿಸುವ ಉತ್ತರ ಪ್ರದೇಶಕ್ಕೆ 17 ಭೇಟಿಗಳನ್ನು ನೀಡಿದ್ದರು.

ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ಮೋದಿ ಈಶಾನ್ಯ ಭಾರತದ ಅಸ್ಸಾಂ,ತ್ರಿಪುರಾ ಮತ್ತು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರೂ ಮಣಿಪುರಕ್ಕೆ ಹೋಗಿರಲಿಲ್ಲ. ಅಸ್ಸಾಮಿಗೆ ಮೂರು ಭೇಟಿಗಳನ್ನು ನೀಡಿದ್ದ ಅವರು ತ್ರಿಪುರಾ ಮತ್ತು ಅರುಣಾಚಲ ಪ್ರದೇಶಕ್ಕೆ ತಲಾ ಒಂದು ಭೇಟಿ ನೀಡಿದ್ದರು.

ಕಳೆದ ವರ್ಷದ ನವಂಬರ್‌ನಲ್ಲಿ ನಡೆದಿದ್ದ ಪಂಚರಾಜ್ಯ ಚುನಾವಣೆಗಳ ಸಂದರ್ಭದಲ್ಲಿ ಮೋದಿ ಮಣಿಪುರಕ್ಕೆ ಹೊಂದಿಕೊಂಡಿರುವ ಮಿಜೊರಾಮ್ ಅನ್ನು ಹೊರತುಪಡಿಸಿ ಇತರ ಎಲ್ಲ ರಾಜ್ಯಗಳಿಗೆ ಪ್ರವಾಸ ಕೈಗೊಂಡಿದ್ದರು. ಮಣಿಪುರ ಹಿಂಸಾಚಾರದಿಂದಾಗಿ ಸ್ಥಳಾಂತರಗೊಂಡ ಭಾರೀ ಸಂಖ್ಯೆಯ ಕುಕಿ-ಝೋ ಸಮುದಾಯದ ಜನರಿಗೆ ಮಿಜೊರಾಮ್ ಆಶ್ರಯ ನೀಡಿದೆ.

ಮೇ 2023ರಿಂದ ಮೋದಿ 14 ಅಂತರರಾಷ್ಟ್ರೀಯ ಪ್ರವಾಸಗಳನ್ನೂ ಮಾಡಿದ್ದು,ಇವುಗಳಲ್ಲಿ ಯುಎಇಯಲ್ಲಿ ಹಿಂದು ದೇವಸ್ಥಾನದ ಉದ್ಘಾಟನೆಗೆಂದು ನೀಡಿದ್ದ ಭೇಟಿಯೂ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News