ಬಿಜೆಪಿಯನ್ನು ಎದುರಿಸಲು ‘ಇಂಡಿಯಾʼ ಸ್ಥಾನ ಹೊಂದಾಣಿಕೆ ಮಾಡಬೇಕು: ಮಮತಾ

Update: 2023-12-04 18:14 GMT

ಮಮತಾ ಬ್ಯಾನರ್ಜಿ | Photo: PTI

ಹೊಸದಿಲ್ಲಿ : ವಿಧಾನಸಭಾ ಚುನಾವಣೆಯಲ್ಲಿ, ಹಿಂದಿ ವಲಯದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಳಿಕ ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ದಲ್ಲಿ ಅಸಮಾಧಾನದ ಅಲೆಗಳು ಎದ್ದಿವೆ. ಚುನಾವಣೆಯನ್ನು ಒಂಟಿಯಾಗಿ ಎದುರಿಸುವ ಕಾಂಗ್ರೆಸ್ನ ನಿರ್ಧಾರವು ಹೇಗೆ ಮತಗಳ ವಿಭಜನೆಗೆ ಕಾರಣವಾಯಿತು ಮತ್ತು ಅದರ ಲಾಭವನ್ನು ಬಿಜೆಪಿ ಹೇಗೆ ಪಡೆಯಿತು ಎನ್ನುವುದರತ್ತ ಅವು ಬೆಟ್ಟುಮಾಡಿವೆ.

ಇಂಡಿಯಾ ಘಟಕದ ಇತರ ಸದಸ್ಯರೊಂದಿಗೆ ಸೀಟು ಹಂಚಿಕೆಯನ್ನು ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತು ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ. ‘‘ಇದು ಕಾಂಗ್ರೆಸ್ನ ಸೋಲು, ಜನರದ್ದಲ್ಲ’’ ಎಂದು ಅವರು ಹೇಳಿದ್ದಾರೆ.

‘‘ತೆಲಂಗಾಣದಲ್ಲಿ ಕಾಂಗ್ರೆಸ್ ಜಯಿಸಿದೆ. ಅವರು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲೂ ಗೆಲ್ಲಬಹುದಾಗಿತ್ತು. ಕೆಲವು ಮತಗಳನ್ನು ‘ಇಂಡಿಯಾ’ ಪಕ್ಷಗಳು ಕಸಿದುಕೊಂಡಿವೆ. ಇದು ಸತ್ಯ. ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವಂತೆ ನಾವು ಹೇಳಿದ್ದೆವು. ಮತಗಳ ವಿಭಜನೆಯಿಂದಾಗಿ ಅವರು ಸೋತಿದ್ದಾರೆ’’ ಎಂದು ವಿಧಾನಸಭೆಯಲ್ಲಿ ಮಾತನಾಡುತ್ತಾ ಮಮತಾ ಬ್ಯಾನರ್ಜಿ ಹೇಳಿದರು.

‘‘ಸಿದ್ದಾಂತದ ಜೊತೆಗೆ ತಂತ್ರಗಾರಿಕೆಯೂ ಬೇಕು. ಸ್ಥಾನ ಹೊಂದಾಣಿಕೆ ಒಪ್ಪಂದವಿದ್ದರೆ 2024ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಪ್ರತಿಕ್ರಿಯಿಸಿದ್ದಾರೆ. ಯಾವ ಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆಯೋ ಅಲ್ಲಿ ಬಿಜೆಪಿ ವಿರುದ್ಧದ ಹೋರಾಟದ ನೇತೃತ್ವವನ್ನು ಪ್ರಾದೇಶಿಕ ಪಕ್ಷಗಳೇ ವಹಿಸಿಕೊಳ್ಲಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News