INDIA ಮೈತ್ರಿಕೂಟ ಗೆಲ್ಲದಿದ್ದರೆ ಇಡೀ ದೇಶ ಮಣಿಪುರ, ಹರ್ಯಾಣದಂತಾಗುತ್ತದೆ: ತಮಿಳುನಾಡು ಸಿಎಂ ಸ್ಟಾಲಿನ್
ಚೆನ್ನೈ: ಈ ವರ್ಷದ ಮೇ ತಿಂಗಳಿನಿಂದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಹಾಗೂ ಇತ್ತೀಚೆಗೆ ಧಾರ್ಮಿಕ ಮೆರವಣಿಗೆಯೊಂದರ ಮೇಲೆ ದಾಳಿ ನಡೆದ ನಂತರ ಹರ್ಯಾಣದಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರವನ್ನು ಪ್ರಸ್ತಾಪಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, INDIA ಮೈತ್ರಿಕೂಟ ಗೆಲ್ಲದಿದ್ದರೆ, ಇಡೀ ದೇಶ ಮಣಿಪುರ ಹಾಗೂ ಹರ್ಯಾಣ ರಾಜ್ಯದಂತೆ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಲಯಾಳಂ, ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳ ಆವೃತ್ತಿಯಲ್ಲಿ ಬಿಡುಗಡೆಯಾಗಿರುವ ತಮ್ಮ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಮಾತನಾಡಿರುವ ಎಂ.ಕೆ.ಸ್ಟಾಲಿನ್, ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತಾನು ಚುನಾವಣೆಗೂ ಮುಂಚೆ ನೀಡಿದ್ದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಕುರಿತ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದ್ದಾರೆ.
ಬಹುಸಂಸ್ಕೃತಿ ಹಾಗೂ ವೈವಿಧ್ಯಮಯ ಭಾರತವನ್ನು ನಿರ್ಮಿಸುವಂತೆ ಜನತೆಗೆ ಕರೆ ನೀಡಿರುವ ಎಂ.ಕೆ. ಸ್ಟಾಲಿನ್, ಸಾರ್ವಜನಿಕ ಸಂಸ್ಥೆಗಳನ್ನು ಹಾಳುಗೆಡವಿ, ಅವುಗಳನ್ನು ಕಾರ್ಪೊರೇಟ್ ಉದ್ಯಮಿಗಳಿಗೆ ಹಸ್ತಾಂತರಿಸುತ್ತಿರುವ ವಿಷಯವನ್ನು ಮರೆಮಾಚಲು ಬಿಜೆಪಿಯು ಕೋಮುವಾದವನ್ನು ಮುನ್ನೆಲೆಗೆ ತರುತ್ತಿದೆ ಎಂದೂ ದೂರಿದ್ದಾರೆ. ಏರ್ ಇಂಡಿಯಾ ಸಂಸ್ಥೆಯನ್ನು ಖಾಸಗಿ ಉದ್ಯಮಿಗೆ ಮಾರಾಟ ಮಾಡಲಾಯಿತು ಹಾಗೂ ವಿಮಾನ ನಿಲ್ದಾಣಗಳು ಮತ್ತು ಬಂದರುಗಳನ್ನು ಬಿಜೆಪಿಗೆ ನಿಕಟವಾಗಿರುವ ಉದ್ಯಮಿಗಳ ವಶಕ್ಕೆ ನೀಡಲಾಯಿತು ಎಂದು ಅವರು ತಮ್ಮ ಮಾತಿಗೆ ನಿದರ್ಶನ ನೀಡಿದ್ದಾರೆ.
2002ರಲ್ಲಿನ ಗುಜರಾತ್ ಗಲಭೆಗಳನ್ನೂ ಉಲ್ಲೇಖಿಸಿರುವ ಡಿಎಂಕೆ ಮುಖ್ಯಸ್ಥರೂ ಆದ ಎಂ.ಕೆ.ಸ್ಟಾಲಿನ್, 2002ರಲ್ಲಿ ಗುಜರಾತ್ ನಲ್ಲಿ ಬಿತ್ತಿದ ದ್ವೇಷವು, 2023ರಲ್ಲಿ ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ ಹಾಗೂ ಹರ್ಯಾಣದಲ್ಲಿನ ಕೋಮು ಸಂಘರ್ಷವಾಗಿ ಫಲ ನೀಡಿದೆ” ಎಂದು ಕಟುವಾಗಿ ಟೀಕಿಸಿದ್ದಾರೆ.
INDIA ಮೈತ್ರಿಕೂಟವನ್ನು ಸಾಮಾಜಿಕ ನ್ಯಾಯ, ಸಾಮಾಜಿಕ ಸೌಹಾರ್ದತೆ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ ರಾಜಕಾರಣ ಹಾಗೂ ಸಮಾಜವಾದವನ್ನು ಮರು ಸ್ಥಾಪಿಸಲು ರಚಿಸಲಾಗಿದೆ. ಒಂದು ವೇಳೆ ದ್ವೇಷವನ್ನು ತಡೆಯಲು ಸಾಧ್ಯವಾಗದಿದ್ದರೆ, ಯಾರೂ ಕೂಡಾ ಭಾರತವನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾದಾಗಲೆಲ್ಲ ಡಿಎಂಕೆ ಮುಂಚೂಣಿ ಹೋರಾಟದಲ್ಲಿರುತ್ತಿತ್ತು” ಎಂದೂ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
ಇದರ ಬೆನ್ನಿಗೇ, ತಮ್ಮ ಪಾಡ್ ಕಾಸ್ಟ್ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಿರುವ ಎಂ.ಕೆ.ಸ್ಟಾಲಿನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿಯು, ಡಿಎಂಕೆಯು ಧರ್ಮ, ಜಾತಿ ಹಾಗೂ ಭಾಷೆಯ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದೆ.
ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ಎಂ.ಕೆ.ಸ್ಟಾಲಿನ್ ರ ಆರೋಪವನ್ನು ತಳ್ಳಿ ಹಾಕಿರುವ ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣ್ ತಿರುಪತಿ, ಕೇಂದ್ರ ಸರ್ಕಾರವು ತಮಿಳುನಾಡಿಗೆ ನೀಡಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
‘ಭಾರತಕ್ಕಾಗಿ ಮಾತನಾಡುತ್ತಿದ್ದೇನೆ” ಎಂಬ ಶೀರ್ಷಿಕೆ ಹೊಂದಿದ್ದ ಪಾಡ್ ಕಾಸ್ಟ್ ಸಂಚಿಕೆಯಲ್ಲಿ, ‘ಬಿಜೆಪಿ ಆಡಳಿತಾವಧಿಯಲ್ಲಿ ಭಾರತ ಹೇಗೆ ನಾಶವಾಗುತ್ತಿದೆ’ ಎಂಬ ಕುರಿತು ಎಂ.ಕೆ.ಸ್ಟಾಲಿನ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು.