ಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ಪ್ರತಿಕ್ರಿಯೆ ಬಗ್ಗೆ ನಿರ್ಧರಿಸಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ: ಪ್ರಧಾನಿ ಮೋದಿ

ನರೇಂದ್ರ ಮೋದಿ | PC : PTI
ಹೊಸದಿಲ್ಲಿ: ಎಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತಂತೆ ಮಂಗಳವಾರ ನಡೆದ ಪ್ರಮುಖ ಭದ್ರತಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಈ ಬಗ್ಗೆ ಕ್ರಮ ಕೈಗೊಳ್ಳಲು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.
ಉನ್ನತ ಮಟ್ಟದ ಭದ್ರತಾ ಸಭೆಯಲ್ಲಿ, "ಭಯೋತ್ಪಾದನೆಗೆ ಹೀನಾಯ ಹೊಡೆತ ನೀಡುವುದು ನಮ್ಮ ರಾಷ್ಟ್ರೀಯ ಸಂಕಲ್ಪ" ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
"ನಮ್ಮ ಪ್ರತಿಕ್ರಿಯೆಯ ಕ್ರಮ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಅವರಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯವಿದೆ" ಎಂದು ಮೋದಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಮಂಗಳವಾರ, ಪ್ರಧಾನಿ ಮೋದಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸೇರಿದಂತೆ ಭಾರತದ ಉನ್ನತ ರಕ್ಷಣಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಕೂಡ ಭಾಗವಹಿಸಿದ್ದರು.
ಭಯೋತ್ಪಾದಕರು ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚುವುದಾಗಿ ಪ್ರತಿಜ್ಞೆ ಮಾಡಿದ ಮೋದಿ, ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಇತಿಹಾಸ ಹೊಂದಿರುವ ಪಾಕಿಸ್ತಾನಕ್ಕೆ ಅವರ ಕಲ್ಪನೆಗೂ ಮೀರಿದ ಶಿಕ್ಷೆ ನೀಡುವುದಾಗಿ ಹೇಳಿದ್ದಾರೆ.