ವಿಜಯ್ ಮಲ್ಯ ವಿರುದ್ಧದ ಬ್ಯಾಂಕ್ ದಿವಾಳಿ ಪ್ರಕರಣ: ಬ್ರಿಟನ್ ನಲ್ಲಿ ಭಾರತೀಯ ಬ್ಯಾಂಕ್ ಗಳಿಗೆ ಗೆಲುವು

Update: 2025-04-09 21:15 IST
Vijay Mallya

ವಿಜಯ್ ಮಲ್ಯ | PC : PTI 

  • whatsapp icon

ಲಂಡನ್: ಇದೀಗ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ವಿಜಯ್ ಮಲ್ಯ ಮಾಲಕತ್ವದ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಪಡೆದಿದ್ದ ಸಾಲದ ಮರುಪಾವತಿಯ ತೀರ್ಪಿನ ಜಾರಿಗೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್ ಗಳ ಸಮೂಹಕ್ಕೆ ಲಂಡನ್ ನ್ಯಾಯಾಲಯವೊಂದರಲ್ಲಿ ಗೆಲುವು ದೊರೆತಿದೆ. ಸುದೀರ್ಘ ಕಾಲದಿಂದ ಭಾರತೀಯ ಬ್ಯಾಂಕ್ ಗಳು ನಡೆಸುತ್ತಿದ್ದ ಈ ಕಾನೂನು ಹೋರಾಟವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಕಳೆದ ಫೆಬ್ರವರಿಯಲ್ಲಿ ಅಂಗೀಕಾರಗೊಂಡಿದ್ದ ಮೇಲ್ಮನವಿ ಪ್ರಕರಣದಲ್ಲಿ ಭಾರತೀಯ ಬ್ಯಾಂಕ್ ಗಳ ಪರವಾಗಿ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಾಧೀಶ ಆ್ಯಂಥೋನಿ ಮನ್, ಇದೇ ವೇಳೆ, 69 ವರ್ಷದ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿದ್ದ ಎರಡು ಮೇಲ್ಮನವಿ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದರು. ಅಲ್ಲದೆ, ಅವರನ್ನು ದೇಶಭ್ರಷ್ಟ ಹಾಗೂ ಭಾರತದಲ್ಲಿನ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬೇಕಾಗಿರುವ ವ್ಯಕ್ತಿ ಎಂದು ಘೋಷಿಸಿದರು.

“ಭದ್ರತೆ ಮೇಲಿನ ಬ್ಯಾಂಕ್ ಗಳ ನಿಲುವು ಸಮರ್ಪಕವಾಗಿದ್ದು, ಅದನ್ನು ಅಳವಡಿಸಿಕೊಳ್ಳಲು ಅವು ಅರ್ಹವಾಗಿವೆ” ಎಂದು ನ್ಯಾ. ಆ್ಯಂಥೋನಿ ಮನ್ ತೀರ್ಪು ನೀಡಿದ್ದಾರೆ.

“ಬ್ಯಾಂಕ್ ದಿವಾಳಿ ಆದೇಶವು ಊರ್ಜಿತಗೊಂಡಿದೆ ಎಂಬುದು ಈ ವಿಷಯಕ್ಕೆ ಸಂಬಂಧಿಸಿದ ಅಡಿಬರಹವಾಗಿದೆ” ಎಂದು ಅವರು ತಮ್ಮ ತೀರ್ಪನ್ನು ಮುಕ್ತಾಯಗೊಳಿಸಿದ್ದಾರೆ.

ಭಾರತೀಯ ಬ್ಯಾಂಕ್ ಗಳನ್ನು ಪ್ರತಿನಿಧಿಸಿದ್ದ TLT LLP ಕಾನೂನು ಸಂಸ್ಥೆಯು, ಮಲ್ಯರ ಆಸ್ತಿಗಳ ಮೇಲೆ ಬ್ಯಾಂಕ್ ಗಳು ಭದ್ರತೆ ಹೊಂದಿರಲಿಲ್ಲ ಹಾಗೂ ಬ್ಯಾಂಕ್ ದಿವಾಳಿ ಮೇಲ್ಮನವಿಯು ಸೂಕ್ತವಾಗಿದೆ ಎಂಬುದನ್ನು ತೀರ್ಪು ದೃಢಪಡಿಸಿದೆ ಎಂದು ಹೇಳಿದೆ.

ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿದ್ದ ವಿಜಯ್ ಮಲ್ಯರ ಆಸ್ತಿಯನ್ನು ನಗದೀಕರಿಸುವುದು ಶರತ್ತು ಬದ್ಧವಾಗಿದೆ ಹಾಗೂ ಇಂಗ್ಲೆಂಡ್ ಕಾನೂನಿನನ್ವಯ ಸಾಲವನ್ನು ವಿಸರ್ಜಿಸಲು ಸಾಧ್ಯವಿಲ್ಲ ಎಂಬ ಸಂಗತಿಯನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ TLT LLP ಕಾನೂನು ಸಂಸ್ಥೆಯ ಕಾನೂನು ನಿರ್ದೇಶಕ ನಿಕ್ ಕರ್ಲಿಂಗ್, “ಬ್ಯಾಂಕ್ ಗಳ ಪಾಲಿಗೆ ಇದೊಂದು ಮಹತ್ವದ ಫಲಿತಾಂಶವಾಗಿದೆ. ಈ ತೀರ್ಪು ಹೊರ ಬಂದಿದ್ದಕ್ಕೆ TLT LLPಗೆ ಸಂತಸವಾಗಿದೆ. 2017ರಲ್ಲಿ ಸಾಲ ವಸೂಲಾತಿ ನ್ಯಾಯಾಧಿಕರಣವು ವಿಜಯ್ ಮಲ್ಯ ವಿರುದ್ಧ ನೀಡಿದ್ದ 1.12 ಶತಕೋಟಿ ಪೌಂಡ್ ಮರುಪಾವತಿ ಆದೇಶಕ್ಕೆ ಸಂಬಂಧಿಸಿದಂತೆ ನಾವು ಬ್ಯಾಂಕ್ ನ ಪರವಾಗಿ ಕಾನೂನು ಹೋರಾಟ ನಡೆಸಿದ್ದೆವು” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣವು 2017ರ ಪೂರ್ವೇತಿಹಾಸ ಹೊಂದಿದ್ದು, ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಂಬಂಧಿಸಿದಂತೆ ವಿಜಯ್ ಮಲ್ಯ ಒದಗಿಸಿದ್ದ ವೈಯಕ್ತಿಕ ಖಾತರಿಗೆ ಸಂಬಂಧಿಸಿದಂತೆ ಸಾಲ ವಸೂಲಾತಿ ನ್ಯಾಯಾಧಿಕರಣವು ನೀಡಿದ್ದ ತೀರ್ಪನ್ನು ಆಧರಿಸಿ ಭಾರತೀಯ ಬ್ಯಾಂಕ್ ಗಳು ಬ್ರಿಟನ್ ನ್ಯಾಯಾಲಯಗಳಲ್ಲಿ ದಾವೆ ಹೂಡಿದ್ದವು. ಇದಾದ ನಂತರ, 2018ರಲ್ಲಿ ಬ್ಯಾಂಕ್ ಗಳು ವಿಜಯ್ ಮಲ್ಯರಿಗೆ ಬ್ಯಾಂಕ್ ದಿವಾಳಿ ನೋಟಿಸ್ ಅನ್ನು ಜಾರಿಗೊಳಿಸಿದ್ದವು. ಆದರೆ, ಅವರು ಈ ನೋಟಿಸ್ ಅನ್ನು ವಿವಿಧ ನೆಲೆಗಳಲ್ಲಿ ವಿರೋಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News