ಅಟ್ಟಾರಿ-ವಾಘಾ ಗಡಿ ಬಂದ್ ; ಕೂಡಿಬರದ ʼಶೈತಾನʼನ ಮದುವೆ!

Update: 2025-04-26 22:17 IST
ಅಟ್ಟಾರಿ-ವಾಘಾ ಗಡಿ ಬಂದ್ ; ಕೂಡಿಬರದ ʼಶೈತಾನʼನ ಮದುವೆ!

ವರ ಶೈತಾನ್‌ ಸಿಂಗ್‌ | Photo : x

  • whatsapp icon

ಬಾರ್ಮರ್: ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಇಂದ್ರೋಯ್ ಗ್ರಾಮದ ನಿವಾಸಿ ಶೈತಾನ್ ಸಿಂಗ್ ನಾಲ್ಕು ವರ್ಷಗಳಿಂದ ತನ್ನ ವಿವಾಹದ ದಿನಕ್ಕೆ ಕಾಯುತ್ತಿದ್ದಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೇಸರ್ ಕನ್ವರ್ ಎಂಬವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶೈತಾನ್ ಸಿಂಗ್ ಗೆ ಎಪ್ರಿಲ್ 30ರಂದು ಪಾಕಿಸ್ತಾನದ ಅಮರಕೋಟ್ ನಗರದಲ್ಲಿ ವಿವಾಹ ನಡೆಯಬೇಕಿತ್ತು. ಆದರೆ ವಿವಾಹಕ್ಕೆ ಕೆಲವೇ ದಿನಗಳ ಮೊದಲು ಭಾರತ-ಪಾಕ್ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಜೋಡಿಯ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿದೆ.

ವರ್ಷಗಳ ಕಾಲ ಸತತ ಪ್ರಯತ್ನಗಳ ಬಳಿಕ ಶೈತಾನ್ ಸಿಂಗ್ ಮತ್ತು ಅವರ ಕುಟುಂಬಕ್ಕೆ ಫೆಬ್ರವರಿ 18ರಂದು ವೀಸಾ ಸಿಕ್ಕಿತ್ತು. ಮಂಗಳವಾರ ವರ ತನ್ನ ತಂದೆ, ಸಹೋದರ ಮತ್ತು ಕುಟುಂಬಸ್ಥರೊಂದಿಗೆ ಅಟ್ಟಾರಿ ಗಡಿಗೆ ತೆರಳಿದರು. ಆದರೆ, ಪಹಲ್ಗಾಮ್ ತಲುಪುವ ವೇಳೆಗೆ ಅಟ್ಟಾರಿ-ವಾಘಾ ಗಡಿಯನ್ನು ತಕ್ಷಣವೇ ಮುಚ್ಚುವಂತೆ ಭಾರತ ಸರಕಾರ ಆದೇಶಿಸಿದೆ ಎಂದು ವರನ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ.

ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ. ಪಾಕಿಸ್ತಾನದ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಅಮಾನತುಗೊಳಿಸಿದೆ. ಸಿಂಧೂ ಜಲ ಒಪ್ಪಂದ ಕೈಬಿಡುವುದಾಗಿ ಘೋಷಿಸಿದೆ. ಅಟ್ಟಾರಿ ಗಡಿಯನ್ನು ಬಂದ್ ಮಾಡುವಂತೆ ಸೂಚಿಸಿದೆ.

ʼನಾವು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೆವುʼ ಎಂದು ವರ ಶೈತಾನ್ ಸಿಂಗ್ ನಿರಾಶೆಯನ್ನು ವ್ಯಕ್ತಪಡಿಸುತ್ತಾ ಹೇಳಿದ್ದಾರೆ. ಅವರ ಸೋದರ ಸಂಬಂಧಿ ಸುರೇಂದ್ರ ಸಿಂಗ್ ಕೂಡ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಿಂದ ಇಲ್ಲಿಗೆ ಬಂದಿದ್ದ ನಮ್ಮ ಸಂಬಂಧಿಕರು ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗಬೇಕಾಯಿತು ಎಂದು ಹೇಳಿದ್ದಾರೆ.

ʼನಾವು ಈ ಬೆಳವಣಿಗೆಯಿಂದ ಬಹಳ ನಿರಾಶೆಗೊಂಡಿದ್ದೇವೆ. ಭಯೋತ್ಪಾದನಾ ದಾಳಿಗಳು ರಾಜಕೀಯವಾಗಿ ಮಾತ್ರವಲ್ಲ, ವೈಯಕ್ತಿಕವಾಗಿ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಭಯೋತ್ಪಾದಕರು ಮಾಡಿರುವುದು ತಪ್ಪು, ಈಗ ಮದುವೆಗೆ ಅಡ್ಡಿಯಾಗಿದೆ. ನಾವು ಏನು ಮಾಡುವುದು? ಇದು ಈಗ ಗಡಿಯ ವಿಷಯವಾಗಿದೆʼ, ಎಂದು ಸಿಂಗ್ ಹೇಳಿದ್ದಾರೆ.

ಶೈತಾನ್ ಸಿಂಗ್ ಮತ್ತು ಕೇಸರ್ ಕನ್ವರ್ ಭಾರತ-ಪಾಕ್ ಗಡಿಯ ಎರಡೂ ಬದಿಗಳಲ್ಲಿ ವ್ಯಾಪಿಸಿರುವ ಸೋಧಾ ರಜಪೂತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯದಲ್ಲಿ ಗಡಿಯಾಚೆಗಿನ ವಿವಾಹಗಳು ಸಾಮಾನ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಶೈತಾನ್ ಸಿಂಗ್ ಅವರಿಗೆ ನೀಡಿರುವ ವೀಸಾ ಮೇ 12ರವರೆಗೆ ಮಾನ್ಯವಾಗಿರುತ್ತದೆ. ಗಡಿಯು ಶೀಘ್ರದಲ್ಲೇ ಪುನಃ ತೆರೆದರೆ ನಿಗದಿಯಂತೆ ಮದುವೆ ನಡೆಯಬಹುದೆಂಬ ಆಶಾಭಾವನೆ ಅವರ ಕುಟುಂಬಸ್ಥರಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News