ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರ ಕ್ಷಮಾಯಾಚನೆ ಅಸ್ಪಷ್ಟವಾಗಿದೆ, ಅಕ್ಷರಗಳು ಚಿಕ್ಕದಾಗಿವೆ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಆ.27: ಸುದ್ದಿಸಂಸ್ಥೆ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ತನ್ನ ‘ಹಾನಿಕಾರಕ’ ಹೇಳಿಕೆಗಳಿಗಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಅಧ್ಯಕ್ಷ ಆರ್.ವಿ.ಅಶೋಕನ್ ಅವರು ವೃತ್ತಪತ್ರಿಕೆಗಳಲ್ಲಿ ಪ್ರಕಟಿಸಿರುವ ಬೇಷರತ್ ಕ್ಷಮಾಯಾಚನೆಯು ಅಸ್ಪಷ್ಟವಾಗಿದೆ ಮತ್ತು ಚಿಕ್ಕ ಅಕ್ಷರಗಳಲ್ಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.
ಕ್ಷಮಾಯಾಚನೆಯು ಪ್ರಕಟಗೊಂಡಿರುವ ದಿ ಹಿಂದು ಪತ್ರಿಕೆಯ 20 ಆವೃತ್ತಿಗಳ ಭೌತಿಕ ಪ್ರತಿಗಳನ್ನು ಒಂದು ವಾರದೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಡಾ.ಅಶೋಕನ್ ಪರ ಹಿರಿಯ ವಕೀಲ ಪ.ಎಸ್.ಪಟ್ವಾಲಿಯಾ ಅವರಿಗೆ ನಿರ್ದೇಶನ ನೀಡಿತು.
ಪಿಟಿಐ ಸಂದರ್ಶನದಲ್ಲಿ ಪತಂಜಲಿ ಆತುರ್ವೇದ ಲಿ.ನ ದಾರಿ ತಪ್ಪಿಸುವ ಜಾಹೀರಾತುಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ನೀಡಿದ್ದ ತನ್ನ ‘ಹಾನಿಕಾರಕ’ ಹೇಳಿಕೆಗಳಿಗಾಗಿ ಬೇಷರತ್ ಕ್ಷಮಾಯಾಚನೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಿರುವುದಾಗಿ ಡಾ.ಅಶೋಕನ್ ಜು.9ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.
ಎ.29ರಂದು ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಡಾ.ಅಶೋಕನ್ ಅವರು, ಸರ್ವೋಚ್ಚ ನ್ಯಾಯಾಲಯವು ಐಎಂಎ ಮತ್ತು ಖಾಸಗಿ ವೈದ್ಯರ ಕೆಲವು ಪರಿಪಾಠಗಳನ್ನು ಟೀಕಿಸಿದ್ದು ‘ದುರದೃಷ್ಟಕರ’ಎಂದು ಹೇಳಿದ್ದರು.