ಭಾರತೀಯರಿಗೆ 300 ಕೋ.ರೂ.ಗೂ ಅಧಿಕ ವಂಚನೆ

Update: 2023-10-20 17:27 GMT

Photo Credit: PTI

ಹೊಸದಿಲ್ಲಿ: ಉದ್ಯೋಗ ಮತ್ತು ಸಾಲ ನೀಡಿಕೆಯ ಆಮಿಷವೊಡ್ಡುವ ಮತ್ತು ಪೊಂಝಿ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಮೂರ್ಖರನ್ನಾಗಿಸುವ ಮೂಲಕ ಭಾರತೀಯರಿಗೆ 300 ಕೋ.ರೂ.ಗೂ ಅಧಿಕ ಮೊತ್ತವನ್ನು ವಂಚಿಸಿದ್ದ ವಿದೇಶಿ ಶಕ್ತಿಗಳನ್ನು ಒಳಗೊಂಡಿದ್ದ ಅತ್ಯಾಧುನಿಕ ಮತ್ತು ಸಂಕೀರ್ಣ ಜಾಲವೊಂದನ್ನು ಸಿಬಿಐ ಬಯಲಿಗೆಳೆದಿದೆ. ಈ ಬಗ್ಗೆ ಸಿಬಿಐ ಕಳೆದೊಂದು ವರ್ಷದಿಂದಲೂ ತನಿಖೆ ನಡೆಸುತ್ತಿತ್ತು.

ಹಣವನ್ನು ರವಾನಿಸಲು ಯುಪಿಐ ಖಾತೆಗಳು, ಕ್ರಿಪ್ಟೊ ಕರೆನ್ಸಿ ಮತ್ತು ಅಂತರರಾಷ್ಟ್ರೀಯ ಹಣ ವರ್ಗಾವಣೆಗಳ ಸಂಕೀರ್ಣ ಜಾಲವನ್ನು ಬಳಸಲಾಗುತ್ತಿತ್ತು. ಹಣದ ಜಾಡನ್ನು ವಿಶ್ಲೇಷಿಸಿದ್ದ ಸಿಬಿಐ ಇತ್ತೀಚಿಗೆ ಶಂಕಿತರಿಗೆ ಸಂಬಂಧಿಸಿದ ಹಲವು ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಿತ್ತು.

ಆತಂಕಾರಿ ವಿಷಯವೆಂದರೆ 137 ಮುಖವಾಡ ಕಂಪನಿಗಳು ಮತ್ತು ಅವುಗಳ ನಿರ್ದೇಶಕರು ಈ ವಂಚನೆ ಜಾಲದಲ್ಲಿ ಭಾಗಿಯಾಗಿದ್ದನ್ನು ಸಿಬಿಐ ಬೆಟ್ಟು ಮಾಡಿದೆ.ಈ ಪೈಕಿ ಹೆಚ್ಚಿನ ಕಂಪನಿಗಳು ಬೇಂಗಳೂರಿನಲ್ಲಿ ನೋಂದಣಿಯಾಗಿದ್ದವು. ಕೆಲವು ನಿರ್ದೇಶಕರು ಬೆಂಗಳೂರಿನ ಪೇಔಟ್ ಮರ್ಚಂಟ್ ಸಂಸ್ಥೆಯೊಂದರ ಜೊತೆಗೂ ಸಂಬಂಧವನ್ನು ಹೊಂದಿದ್ದರು.

ಸಿಬಿಐನ ಆಪರೇಷನ್ ಚಕ್ರ 2ರ ಭಾಗವಾಗಿ 2022ರಲ್ಲಿ ತನಿಖೆಯು ಆರಂಭಗೊಂಡಿತ್ತು. ಕೇಂದ್ರ ಗೃಹ ಸಚಿವಾಲಯದ ಅಧೀನದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿಗಳ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

ವಂಚಕರು ವಿವಿಧ ಸಾಮಾಜಿಕ ಜಾಲತಾಣಗಳು ಮತ್ತು ತಮ್ಮ ಜಾಹೀರಾತು ಪೋರ್ಟಲ್‌ಗಳನ್ನು ಬಳಸಿ ಅಮಾಯಕರಿಗೆ ಸಾಲ ನೀಡಿಕೆ,ಅರೆಕಾಲಿಕ ಉದ್ಯೋಗಗಳು,ಪೊಂಝಿ ಯೋಜನೆಗಳು ಮತ್ತು ಬಹುಹಂತಗಳ ಮಾರಾಟ ಯೋಜನೆಗಳಲ್ಲಿ ಹಣ ಹೂಡಿಕೆಗಾಗಿ ಆಮಿಷಗಳನ್ನು ಒಡ್ಡಿದ್ದರು.

ಪೇಔಟ್ ಮರ್ಚಂಟ್ ಸಂಸ್ಥೆಯು 16 ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದು, ಇವುಗಳಿಗೆ ಬಲಿಪಶುಗಳಿಂದ 377 ಕೋ.ರೂ.ಗಳ ಮೊತ್ತ ಯುಪಿಐ ಮೂಲಕ ಹರಿದುಬಂದಿತ್ತು ಮತ್ತು ಹಣವನ್ನು ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿತ್ತು.

ಆರೋಪಿಗಳು ವಿದೇಶಿ ವ್ಯಕ್ತಿಯ ಜೊತೆ ನಂಟು ಹೊಂದಿದ್ದನ್ನೂ ತನಿಖೆಯು ಬಹಿರಂಗಗೊಳಿಸಿದೆ. ಬೇನಾಮಿ ಕಂಪನಿಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಗಳನ್ನು ಬದಲಿಸಿದ್ದ ಬೆಂಗಳೂರಿನ ಇಬ್ಬರು ಲೆಕ್ಕ ಪರಿಶೋಧಕರ ಮೇಲೆ ದಾಳಿ ನಡೆದಿದ್ದ ಸಂದರ್ಭದಲ್ಲಿ ವಂಚನೆಯಲ್ಲಿ ವಿದೇಶಿ ಪ್ರಜೆಯ ಪಾಲ್ಗೊಳ್ಳುವಿಕೆಗೆ ಅನುಕೂಲ ಕಲ್ಪಿಸಿದ್ದ ಅವರ ಪಾತ್ರವನ್ನು ಬೆಳಕಿಗೆ ತಂದಿರುವ ದಾಖಲೆಗಳು,ಇಮೇಲ್ ಸಂವಹನಗಳು ಮತ್ತು ವಾಟ್ಸ್ಯಾಪ್ ಚಾಟ್‌ಗಳು ಪತ್ತೆ ಯಾಗಿದ್ದವು ಎಂದು ಸಿಬಿಐ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News