ಭಾರತದ ಮೊದಲ ರೈಲು ಎಟಿಎಂ ಆರಂಭ

Update: 2025-04-16 20:42 IST
ಭಾರತದ ಮೊದಲ ರೈಲು ಎಟಿಎಂ ಆರಂಭ

PC : NDTV 

  • whatsapp icon

ಹೊಸದಿಲ್ಲಿ: ಪ್ರಯಾಣಿಕರಿಗೆ ಅನುಕೂಲಗಳನ್ನು ಹೆಚ್ಚಿಸುವ ಮಹತ್ವದ ಕ್ರಮವೊಂದರಲ್ಲಿ ಭಾರತೀಯ ರೈಲ್ವೆಯು ಇದೇ ಮೊದಲ ಬಾರಿಗೆ ರೈಲಿನಲ್ಲಿ ಎಟಿಎಂ ಯಂತ್ರವನ್ನು ಅಳವಡಿಸಿದೆ. ಇದರಿಂದ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಪ್ರಯಾಣಿಕರು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.

ವರದಿಗಳ ಪ್ರಕಾರ ಮಧ್ಯ ರೈಲ್ವೆಯು ಮಂಗಳವಾರ ಮುಂಬೈ-ಮನ್ಮಾಡ್ ಪಂಚವಟಿ ಎಕ್ಸ್‌ಪ್ರೆಸ್‌ ನಲ್ಲಿ ಎಟಿಎಂ ಸೇವೆಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ರೈಲು ಪ್ರಯಾಣಿಕರಿಗೆ ನೇರವಾಗಿ ಹಣಕಾಸು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿರಿಸಿದೆ.

ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಸಹಭಾಗಿತ್ವದಲ್ಲಿ ಏರ್ ಕಂಡಿಷನ್ಡ್ ಬೋಗಿಯಲ್ಲಿ ಎಟಿಎಂ ಯಂತ್ರವನ್ನು ಸ್ಥಾಪಿಸಲಾಗಿದೆ. ಈ ವಿನೂತನ ಕ್ರಮವು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ಜೊತೆಗೆ ರೈಲ್ವೆಯ ಟಿಕೆಟೇತರ ಆದಾಯವನ್ನೂ ಹೆಚ್ಚಿಸಲಿದೆ.

ಪಂಚವಟಿ ಎಕ್ಸ್‌ಪ್ರೆಸ್‌ ನ ಎಲ್ಲ 22 ಬೋಗಿಗಳು ವೆಸ್ಟಿಬ್ಯೂಲ್‌ಗಳ ಮೂಲಕ ಅಂತರ ಸಂಪರ್ಕಿತವಾಗಿರುವದರಿಂದ ಎಲ್ಲ ಪ್ರಯಾಣಿಕರಿಗೂ ಎಟಿಎಂ ಸೌಲಭ್ಯ ಲಭ್ಯವಿದೆ. ಎಟಿಎಂ ಯಂತ್ರಕ್ಕೆ ಶಟರ್, ಸಿಸಿಟಿವಿ ಕ್ಯಾಮರಾಗಳ ಕಣ್ಗಾವಲು ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಪ್ರಾಯೋಗಿಕ ಸಂಚಾರ ಸುಗಮವಾಗಿತ್ತಾದರೂ ಇಗತ್‌ಪುರಿ ಮತ್ತು ಕಸಾರಾ ನಡುವೆ ಕೊಂಚ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡಿದ್ದನ್ನು ಅಧಿಕಾರಿಗಳು ಗಮನಿಸಿದ್ದಾರೆ. ಈ ಮಾರ್ಗದಲ್ಲಿ ಹಲವಾರು ಸುರಂಗಗಳಿದ್ದು, ಸೀಮಿತ ಸಿಗ್ನಲ್ ವ್ಯಾಪ್ತಿಯಿದೆ. ಆದಾಗ್ಯೂ ಪ್ರಯಾಣದುದ್ದಕ್ಕೂ ಹೆಚ್ಚಿನ ಭಾಗಗಳಲ್ಲಿ ಎಟಿಎಂ ಸುಗಮವಾಗಿ ಕಾರ್ಯ ನಿರ್ವಹಿಸಿತ್ತು.

ನೂತನ ಎಟಿಎಂನಿಂದ ಪಂಚವಟಿ ಎಕ್ಸ್‌ಪ್ರೆಸ್‌ ನ ಪ್ರಯಾಣಿಕರಿಗೆ ಮಾತ್ರವಲ್ಲ, ಮುಂಬೈ-ಹಿಂಗೋಲಿ ಜನಶತಾಬ್ದಿ ಎಕ್ಸ್‌ಪ್ರೆಸ್‌ ನ ಬೋಗಿಗಳು ಇದಕ್ಕೆ ಜೋಡಣೆಗೊಳ್ಳುವುದರಿಂದ ಅದರ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News