ಸರಕಾರದ ಹಸ್ತಕ್ಷೇಪ ಉಲ್ಲೇಖಿಸಿ ವಿಶ್ವಸಂಸ್ಥೆಯ ಸಹಸಂಸ್ಥೆಯಿಂದ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಕೆಳದರ್ಜೆಗಿಳಿಸಲು ಶಿಫಾರಸು

Update: 2025-04-29 18:45 IST
ಸರಕಾರದ ಹಸ್ತಕ್ಷೇಪ ಉಲ್ಲೇಖಿಸಿ ವಿಶ್ವಸಂಸ್ಥೆಯ ಸಹಸಂಸ್ಥೆಯಿಂದ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಕೆಳದರ್ಜೆಗಿಳಿಸಲು ಶಿಫಾರಸು
PC : PTI 
  • whatsapp icon

ಹೊಸದಿಲ್ಲಿ: ಜಿನಿವಾ ಮೂಲದ ವಿಶ್ವಸಂಸ್ಥೆ ಸಂಯೋಜಿತ ಜಾಗತಿಕ ಮಾನವ ಹಕ್ಕುಗಳ ಸಂಸ್ಥೆಗಳ ಒಕ್ಕೂಟ(GANHRI)ದ ಮಾನ್ಯತೆ ಕುರಿತ ಉಪಸಮಿತಿ(ಎಸ್‌ಸಿಎ)ಯು ಸರಕಾರದ ಹಸ್ತಕ್ಷೇಪವನ್ನು ಉಲ್ಲೇಖಿಸಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ವನ್ನು ‘ಎ’ ವರ್ಗದಿಂದ ‘ಬಿ’ವರ್ಗಕ್ಕಿಳಿಸಲು ಶಿಫಾರಸು ಮಾಡಿದೆ. ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್‌ಎಚ್‌ಆರ್‌ಸಿಯನ್ನು ಕೆಳಮಟ್ಟಕ್ಕಿಳಿಸಲಾಗಿದೆ ಎಂದು thewire.in ವರದಿ ಮಾಡಿದೆ.

ಮಾರ್ಚ್‌ನಲ್ಲಿ ನಡೆದಿದ್ದ GANHRIನ 45ನೇ ಅಧಿವೇಶನದಲ್ಲಿ ಮಾಡಲಾಗಿರುವ ಶಿಫಾರಸು, ತನಿಖೆಗಳಲ್ಲಿ ಪೋಲಿಸ್ ಅಧಿಕಾರಿಗಳ ಪಾಲ್ಗೊಳ್ಳುವಿಕೆಯಿಂದ ಎನ್‌ಎಚ್‌ಆರ್‌ಸಿಯ ನಿಷ್ಪಕ್ಷತನದ ಮೇಲೆ ಪ್ರಭಾವ ಬೀರುವಿಕೆ ಮತ್ತು ಹಿರಿಯ ಸರಕಾರಿ ಅಧಿಕಾರಿಯೋರ್ವರನ್ನು ಮಹಾ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸುವ ಸರಕಾರದ ಅಧಿಕಾರ ಸೇರಿದಂತೆ ಹಲವು ಕಳವಳಗಳನ್ನು ಉಲ್ಲೇಖಸಿದ್ದು,ಆ ಹುದ್ದೆಗೆ ಸ್ವತಂತ್ರವಾಗಿ ನೇಮಕ ಮಾಡಿಕೊಳ್ಳಲು ಎನ್‌ಎಚ್‌ಆರ್‌ಸಿ ಸಮರ್ಥವಾಗಿದೆ ಎಂದು ಪ್ರತಿಪಾದಿಸಿದೆ.

ಬಹುತ್ವವನ್ನು ಪ್ರತಿಬಿಂಬಿಸುವುದು ಸೇರಿದಂತೆ ಆಯೋಗದ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೂ ಶಿಫಾರಸು ಮಾಡಿರುವ ಎಸ್‌ಸಿಎ,ಎನ್‌ಎಚ್‌ಆರ್‌ಸಿಯು ಎಲ್ಲ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಪರಿಹರಿಸಬೇಕು,ಆದರೆ ಮಾನವ ಹಕ್ಕುಗಳ ಹೋರಾಟಗಾರರು,ಪತ್ರಕರ್ತರು ಮತ್ತು ಗ್ರಹಿತ ಟೀಕಾಕಾರರನ್ನು ಗುರಿಯಾಗಿಸಿಕೊಂಡು ಹೆಚ್ಚುತ್ತಿರುವ ಪ್ರಕರಣಗಳನ್ನು ಅದು ಬಗೆಹರಿಸಿಲ್ಲ ಎಂದು ಕಳವಳವನ್ನು ವ್ಯಕ್ತಪಡಿಸಿದೆ.

ಎನ್‌ಎಚ್‌ಆರ್‌ಸಿಯ ಸ್ವಾತಂತ್ರ್ಯಮತ್ತು ಪರಿಣಾಮಕಾರಿತ್ವವನ್ನು ಪ್ಯಾರಿಸ್ ತತ್ವಗಳ ಅಗತ್ಯಕ್ಕೆ ಅನುಗುಣವಾಗಿ ಕಾಯ್ದುಕೊಳ್ಳಲಾಗಿಲ್ಲ ಎಂದೂ ಎಸ್‌ಸಿಎ ಕಳವಳ ವ್ಯಕ್ತಪಡಿಸಿದೆ.

ಎನ್‌ಎಚ್‌ಆರ್‌ಸಿ 2023ರಿಂದಲೂ ಪರಿಶೀಲನೆಯಲ್ಲಿದೆ ಮತ್ತು ಸತತ ಎರಡು ವರ್ಷಗಳ ಕಾಲ ಸಂಸ್ಥೆಗೆ ಮಾನ್ಯತೆ ನಿರ್ಧಾರವನ್ನು ಮುಂದೂಡಲಾಗಿದೆ ಎಂದು ಎಸ್‌ಸಿಎ ತನ್ನ ವರದಿಯಲ್ಲಿ ತಿಳಿಸಿದೆ.

ಎನ್‌ಎಚ್‌ಆರ್‌ಸಿಯ ಸ್ಥಾನಮಾನವನ್ನು ಕೆಳದರ್ಜೆಗಿಳಿಸಲು ಶಿಫಾರಸನ್ನು ಮಾಡಲಾಗಿದ್ದರೂ,ಇನ್ನೂ ಒಂದು ವರ್ಷದವರೆಗೆ ಅದು ಜಾರಿಗೊಳ್ಳುವುದಿಲ್ಲ,ಅಂದರೆ 2026ರಲ್ಲಿ ನಡೆಯಲಿರುವ ಮುಂದಿನ GANHRI ಅಧಿವೇಶನದವರೆಗೂ ಎನ್‌ಎಚ್‌ಆರ್‌ಸಿ ‘ಎ’ ಸ್ಥಾನಮಾನವನ್ನು ಹೊಂದಿರುತ್ತದೆ ಮತ್ತು ಪ್ಯಾರಿಸ್ ತತ್ವಗಳಿಗೆ ತನ್ನ ಬದ್ಧತೆಯನ್ನು ಸಾಬೀತುಗೊಳಿಸಲು ಅವಕಾಶವನ್ನು ಹೊಂದಿರುತ್ತದೆ.

GANHRI 120 ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಿದೆ. ಈ ಪೈಕಿ 88 ದೇಶಗಳು ಪ್ಯಾರಿಸ್ ತತ್ವಗಳಿಗೆ ಸಂಪೂರ್ಣವಾಗಿ ಬದ್ಧವಾಗಿದ್ದು,‘ಎ’ ಸ್ಥಾನಮಾನ ಮಾನ್ಯತೆಯನ್ನು ಪಡೆದಿವೆ. ಪ್ಯಾರಿಸ್ ತತ್ವಗಳಿಗೆ ಭಾಗಶಃ ಬದ್ಧತೆಯನ್ನು ಹೊಂದಿರುವ 32 ದೇಶಗಳು ‘ಬಿ’ಸ್ಥಾನಮಾನವನ್ನು ಹೊಂದಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 1993ರಲ್ಲಿ ಪ್ಯಾರಿಸ್ ತತ್ವಗಳನ್ನು ಅಂಗೀಕರಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News