ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ : ಶಂಕರ್ ರಾಯ್ ಚೌಧುರಿ

ಶಂಕರ್ ರಾಯ್ ಚೌಧುರಿ | PC : PTI
ಕೋಲ್ಕತಾ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಗುಪ್ತಚರ ವೈಫಲ್ಯವೇ ಕಾರಣ ಎಂದು ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಶಂಕರ್ ರಾಯ್ ಚೌಧುರಿ ಶುಕ್ರವಾರ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ದೇಶದ 18ನೇ ಸೇನಾ ಮುಖ್ಯಸ್ಥ ರಾಯ್ ಚೌಧುರಿ, ತಾನು ಇದು ಗುಪ್ತಚರ ವೈಫಲ್ಯ ಎಂದು ಭಾವಿಸುತ್ತೇನೆ. ಈ ಲೋಪದೋಷಗಳಿಗೆ ಯಾರಾದರೂ ಉತ್ತರಿಸಲೇಬೇಕು. ನಿರ್ಲಕ್ಷ್ಯಕ್ಕೆ ಖಂಡಿತವಾಗಿ ಯಾರಾದರೂ ಹೊಣೆಗಾರರಾಗಿರುತ್ತಾರೆ. ಇದರ ಪರಿಣಾಮಗಳಿಗೆ ಅವರನ್ನು ಉತ್ತರದಾಯಿಯನ್ನಾಗಿ ಮಾಡಬೇಕು ಎಂದಿದ್ದಾರೆ.
ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನ ಹಾಗೂ ಅದರ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯ ಪಾತ್ರವಿದೆ. ಹಲವು ಉಗ್ರರು ನುಸುಳಲು ಹೇಗೆ ಸಫಲರಾದರು? ಈ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನದ ಮೇಲೆ ಭಾರತ ಸರಕಾರದ ರಾಜತಾಂತ್ರಿಕ ನಿರ್ಬಂಧಗಳು ಸಮರ್ಪಕ ಪ್ರಕ್ರಿಯೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತೆಗೆದುಕೊಂಡಿರುವ ರಾಜತಾಂತ್ರಿಕ ಕ್ರಮಗಳು ಸಾಕಾಗುವುದಿಲ್ಲ. ಪ್ರತಿರೋಧದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರೆ, ಅವುಗಳು ಯಾವ ರೀತಿಯ ಪ್ರತಿರೋಧದ ಕ್ರಮಗಳು ಎಂಬುದು ನಮ್ಮನ್ನು ಅವಲಂಬಿಸಿದೆ. ಸಾಂಪ್ರದಾಯಿಕ ಕ್ರಮಗಳು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.
‘‘ನಾವು ಅವರ ರೀತಿಯಲ್ಲೇ ಪ್ರತಿಕ್ರಿಯಿಸಬೇಕು. ಇದೊಂದೇ ನಮಗೆ ಉಳಿದಿರುವ ದಾರಿ ಎಂದು ಅನಿಸುತ್ತಿದೆ. ಅಂತರ್ ರಾಷ್ಟ್ರೀಯ ಸಮುದಾಯವನ್ನು ಜೊತೆಗೆ ಇಟ್ಟುಕೊಂಡು ನಾವು ಪ್ರತೀಕಾರ ತೀರಿಸಬೇಕು’’ ಎಂದು ಅವರು ಹೇಳಿದರು.
ದಾಳಿಕೋರರಿಗೆ ಒಳಗಿನವರ ನೆರವಿನ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ‘‘ಹಾಗೆ ಆಗಿದೆ ಎಂದು ನಾನು ನೇರವಾಗಿ ಹೇಳುತ್ತಿಲ್ಲ. ಆದರೆ, ನಾವು ನಮ್ಮ ಕಣ್ಣು ಹಾಗೂ ಕಿವಿಗಳನ್ನು ತೆರೆದು ಇಡಬೇಕು. ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಹಾಗೂ ಐಎಸ್‌ಐ ಯಾವಾಗಲೂ ಸಕ್ರಿಯ ಪಾತ್ರ ವಹಿಸುತ್ತದೆ. ನಮಗೆ ನಮ್ಮದೇ ಆದ ಗುಪ್ತಚರ ಸಂಸ್ಥೆ ‘ರಾ’ ಇದೆ. ನಾವು ಅದನ್ನು ಪರಿಣಾಮಕಾರಿಯಾಗಿ ಬಳಸಬೇಕು’’ ಎಂದು ಅವರು ಹೇಳಿದರು.
ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೇಳಿಕೆಗಳು ಭಯೋತ್ಪಾದಕರಿಗೆ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಿವೆಯೇ ಎಂಬ ಪ್ರಶ್ನೆಗೆ ಅವರು, ಪಾಕಿಸ್ತಾನದಲ್ಲಿ ಅದು ಮಾತ್ರವೇ ಕೆಲಸ ಮಾಡುತ್ತದೆ ಎಂಬುದು ನನ್ನ ಭಾವನೆ. ಖಂಡಿತವಾಗಿ ಅದು ಭಯೋತ್ಪಾದಕ ಸಂಘಟನೆಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಶಂಕರ್ ರಾಯ್ ಚೌಧುರಿ ಹೇಳಿದ್ದಾರೆ.