ಇಸ್ರೇಲ್ – ಹಮಾಸ್ ಕದನ ವಿರಾಮ ಪ್ರಗತಿಯಲ್ಲಿ : ಅಮೆರಿಕ ಅಧ್ಯಕ್ಷ ಜೋ ಬೈಡನ್

Update: 2024-08-17 16:15 GMT

ಜೋ ಬೈಡನ್ |  PC : NDTV  

ವಾಶಿಂಗ್ಟನ್ : ಗಾಝಾಪಟ್ಟಿಯಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವೆ ಭುಗಿಲೆದ್ದಿರುವ ಯುದ್ದವು 10 ತಿಂಗಳು ದಾಟಿರುವಂತೆಯೇ ಕದನವಿರಾಮಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವು ಹೆಚ್ಚುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಹೇಳಿಕೆಯೊಂದನ್ನು ನೀಡಿ, ಕದನ ವಿರಾಮವನ್ನು ಏರ್ಪಡಿಸುವ ನಿಟ್ಟಿನಲ್ಲಿ ನಾವು ಹಿಂದೆಂದಿಗಿಂತಲೂ ಹೆಚ್ಚು ಹತ್ತಿರಕ್ಕೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.

ಕದನ ವಿರಾಮದ ನೂತನ ಪ್ರಸ್ತಾವವನ್ನು ಮುಂದಿಡಲು ಈ ವಾರಾಂತ್ಯದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಇಸ್ರೇಲ್‌ಗೆ ಪ್ರಯಾಣಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಕದನವಿರಾಮ ಒಪ್ಪಂದವನ್ನು ಅಂತಿಮಗೊಳಿಸುವ ಸಾಮರ್ಥ್ಯವನ್ನು ದುರ್ಬಲಗೊಳಿಸುವ ಅಥವಾ ಪ್ರದೇಶದಲ್ಲಿ ವಾತಾವರಣವನ್ನು ಉದ್ವಿಗ್ನಗೊಳಿಸುವಂತಹ ಯಾವುದೇ ಕೃತ್ಯಗಳಿಂದ ಈ ಪ್ರದೇಶದ ಎಲ್ಲಾ ಪಕ್ಷಗಳು ದೂರವಿರಬೇಕೆಂದು ಹೇಳಿಕೆ ತಿಳಿಸಿದೆ.

ಇಸ್ರೇಲ್-ಹಮಾಸ್ ನಡುವೆ ಕದನವಿರಾಮಕ್ಕೆ ಸಂಬಂಧಿಸಿ ಜೋ ಬೈಡನ್ ಅವರು ಮೇ ತಿಂಗಳಲ್ಲಿ ರೂಪಿಸಿದ ಕಾರ್ಯಚೌಕಟ್ಟಿನ ವಿವರಗಳನ್ನು ಅಂತಿಮಗೊಳಿಸಬೇಕೆಂದು ಈಜಿಪ್ಟ್, ಖತರ್ ಹಾಗೂ ಅಮೆರಿಕದ ಮಧ್ಯವರ್ತಿಗಳು ಕೋರಿದ್ದಾರೆ.

ಈ ಮಧ್ಯೆ ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಹೇಳಿಕೆಯೊಂದನ್ನು ನೀಡಿ, ನೂತನ ಕದನವಿರಾಮ ಸೂತ್ರದಲ್ಲಿ ಇಸ್ರೇಲ್ ಒಡ್ಜಿರುವ ‘ನೂತನ ಶರತ್ತುಗಳನ್ನು’ ತಾನು ವಿರೋಧಿಸುವುದಾಗಿ ತಿಳಿಸಿದೆ.

ಕದನವಿರಾಮಕ್ಕೆ ಸಂಬಂಧಿಸಿದಂತೆ ಮೇ 27ರ ಸೂತ್ರಗಳನ್ನು ಒಪ್ಪಿಕೊಳ್ಳುವಂತೆ ಹಮಾಸ್ ಮೇಲೆ ಒತ್ತಡ ಹೇರಬೇಕೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂಧಾನಕಾರರನ್ನು ಆಗ್ರಹಿಸಿದ್ದರು.

ಈಜಿಪ್ಟ್ ಜೊತೆಗಿನ ಗಾಝಾಗಡಿಯಲ್ಲಿ ಇಸ್ರೇಲಿ ಪಡೆಗಳ ನಿಯೋಜನೆ ಹಾಗೂ ಇಸ್ರೇಲಿ ಒತ್ತೆಯಾಳುಗಳ ವಿನಿಮಯಕ್ಕೆ ಪ್ರತಿಯಾಗಿ ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸುವುದಕ್ಕೆ ಸಂಬಂಧಿಸಿ ಇಸ್ರೇಲ್ ಒಡ್ಡಿರುವ ನಿಬಂಧನೆಗಳಿಗೆ ಹಮಾಸ್ ಆಕ್ಷೇಪವನ್ನು ವ್ಯಕ್ತಪಡಿಸಿದೆಯೆನ್ನಲಾಗಿದೆ. ಕದನವಿರಾಮಕ್ಕೆ ಸಮ್ಮತಿಸುವಂತೆ ಇತ್ತೀಚಿನ ವಾರಗಳಲ್ಲಿ ಇಸ್ರೇಲ್ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚುತ್ತಿದೆ. ಗಾಝಾ ಗದನವಿರಾಮಕ್ಕೆ ಒತ್ತಾಯಿಸಿ ಶುಕ್ರವಾರ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿ ಲ್ಯಾಮ್ಮಿ ಹಾಗೂ ಅವರ ಫ್ರೆಂಚ್‌ಸಹವರ್ತಿ ಸ್ಟೀಫಾನೆ ಸೆಜೊರ್ನೆ ಅವರು ಇಸ್ರೇಲ್ ಜೊತೆ ಮಾತುಕತೆ ನಡೆಸಿದರು.

ಹಮಾಸ್ ರಾಜಕೀಯ ನಾಯಕ ಹಾನಿಯೆಹ್ ಅವರ ಹತ್ಯೆಗೆ ಸೇಡು ತೀರಿಸಲು ಒಂದು ವೇಳೆ ಇರಾನ್ ತನ್ನ ಮೇಲೆ ದಾಳಿ ನಡೆಸಿದರೆ, ತಾನು ವಿದೇಶಿ ಬೆಂಬಲವನ್ನು ನಿರೀಕ್ಷಿಸುವುದಾಗಿ ಇಸ್ರೇಲ್ ವಿದೇಶಾಂಗ ಸಚಿವ ಇಸ್ರಾಯೆಲ್ ಕಾಟ್ಝ್ ತಿಳಿಸಿದ್ದಾರೆ.

►ಕದನ ವಿರಾಮ : ಅಮೆರಿಕದ ಪ್ರಸ್ತಾವಗಳು

1. ಮೊದಲ ಹಂತದ ಕದನ ವಿರಾಮವು ಆರು ವಾರಗಳವರೆಗೆ ಸ್ಥಗಿತಗೊಳ್ಳಬೇಕು. ಇದೇ ಅವಧಿಯಲ್ಲಿ ಹಮಾಸ್‌ನ ವಶದಲ್ಲಿರುವ ಒತ್ತೆಯಾಳುಗಳು ಹಾಗೂ ಇಸ್ರೇಲ್‌ನಲ್ಲಿ ಬಂಧನದಲ್ಲಿರುವ ಫೆಲೆಸ್ತೀನಿಯರ ಬಿಡುಗಡೆ.

2. ಎರಡನೆ ಹಂತದಲ್ಲಿ ಇಸ್ರೇಲ್-ಹಮಾಸ್ ನಡುವಿನ ಯುದ್ಧವು ಶಾಶ್ವತವಾಗಿ ಅಂತ್ಯಗೊಳ್ಳಬೇಕು ಹಾಗೂ ಎಲ್ಲಾ ಒತ್ತೆಯಾಳುಗಳ ಬಿಡುಗಡೆಯಾಗಬೇಕು.

3. ಅಂತಿಮ ಹಂತದಲ್ಲಿ ಇಸ್ರೇಲಿ ರಕ್ಷಣಾ ಪಡೆಗಳ (ಐಡಿಎಫ್) ಆಕ್ರಮಣದಿಂದಾಗಿ ಭಗ್ನಾವಶೇಷವಾಗಿರುವ ಗಾಝಾ ಪಟ್ಟಿಯ ಪುನರ್‌ ನಿರ್ಮಾಣ ಕಾರ್ಯ ಒಳಗೊಳ್ಳಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News