60ನೇ ವಯಸ್ಸಿನಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಪಿಎಚ್‌ಡಿ ಪದವಿ

Update: 2024-07-19 16:53 GMT

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ | PC : X \ S.R. Raghunathan

ಚೆನ್ನೈ : ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ತಮ್ಮ 60ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್(ಐಐಟಿ-ಎಂ)ನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಪಿಎಚ್‌ಡಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಮುಖ್ಯವಾಗಿ ಭಾರತದ ಮೂರನೇ ಮಾನವ ರಹಿತ ಚಂದ್ರ ಯಾನವನ್ನು ಯಶಸ್ವಿಯಾಗಿ ಆರಂಭಿಸಿರುವುದು ಸೇರಿದಂತೆ ಭಾರತೀಯ ವಿಜ್ಞಾನಕ್ಕೆ ನೀಡಿದ ಕೊಡುಗೆಗೆ ಐಐಟಿ-ಎಂ ತನ್ನ ನಿಯಮವನ್ನು ಸಡಿಲಗೊಳಿಸಿದೆ ಹಾಗೂ 61ನೆ ಘಟಿಕೋತ್ಸವದಲ್ಲಿ ಸೋಮನಾಥ್ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.

ಸೋಮನಾಥ್ ಅವರ ಪ್ರೌಢ ಪ್ರಬಂಧದ ಶೀರ್ಷಿಕೆ ‘‘ವೈಬ್ರೇಷನ್ ರೆಸ್ಪಾನ್ಸ್ ಸ್ಟಡೀಸ್ ಆನ್ ಮಾಡಿಫೈಡ್ ಹೈಪರ್ ಇಲಾಸ್ಟಿಕ್ ಮೆಟೀರಿಯಲ್ ಮಾಡೆಲ್ಸ್ ಫಾರ್ ಅಪ್ಲಿಕೇಶನ್ ಏರೋಸ್ಪೇಸ್ ಸಿಸ್ಟಮ್ಸ್’’. ಐಐಟಿ ಮದ್ರಾಸ್‌ನ ಗವರ್ನರ್‌ಗಳ ಮಂಡಳಿಯ ಅಧ್ಯಕ್ಷ ಡಾ. ಪವನ್ ಗೋಯೆಂಕಾ ಹಾಗೂ ಐಎಟಿ ಮದ್ರಾಸ್‌ನ ನಿರ್ದೇಶಕ ಪ್ರೊ. ವಿ. ಕಾಮಕೋಟಿ ಅವರು ಸೋಮನಾಥ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದರು.

ಇಸ್ರೋ ಅಧ್ಯಕ್ಷರಾಗಿರುವ ಸೋಮನಾಥ್ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸೇವೆಗಾಗಿ ಇದುವರೆಗೆ 10 ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. ಆದರೆ, ಸೋಮನಾಥ್ ಅವರು ತಾನು ಸ್ವಂತವಾಗಿ ಒಂದು ಡಾಕ್ಟರೇಟ್ ಪದವಿ ಪಡೆಯಬೇಕು ಎಂದು ಬಯಸಿದ್ದರು. ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನ ಮಾರ್ಕ್ 3ರ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದ ಸಂದರ್ಭ ಅವರು ಪಿಎಚ್‌ಡಿಗೆ ನೋಂದಣಿ ಮಾಡಿಕೊಂಡಿದ್ದರು.

‘‘ನಾನು ಕೆಲಸದಲ್ಲಿ ಮಗ್ನವಾಗಿದ್ದುದರಿಂದ, ಪಿಎಚ್‌ಡಿ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಇಸ್ರೋದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಬಳಿಕ ನನಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದು ನಿಜಕ್ಕೂ ಅದೃಷ್ಟ. ಇದು ನಿಜವಾಗಿಯೂ ದೊಡ್ಡ ಗೌರವ’’ ಎಂದು ಸೋಮನಾಥ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News