ಇಸ್ರೊದ ಮುಂದಿನ ಯೋಜನೆ ‘ಶುಕ್ರಯಾನ-1’

Update: 2023-09-29 13:25 GMT

Photo: NDTV 

ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ‘ಚಂದ್ರಯಾನ-3’ ಹಗುರವಾಗಿ ಯಶಸ್ವಿಯಾಗಿ ಇಳಿದ ಒಂದು ತಿಂಗಳ ಬಳಿಕ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಈಗ ತನ್ನ ಕಣ್ಣುಗಳನ್ನು ಶುಕ್ರನತ್ತ ಹರಿಸಿದೆ.

ಶುಕ್ರ ಗ್ರಹ ಸಂಶೋಧನಾ ಯೋಜನೆಯನ್ನು ರೂಪಿಸಲಾಗಿದೆ ಹಾಗೂ ಕೆಲವು ಸಲಕರಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ. ಈ ಯೋಜನೆಗೆ ಪ್ರಾಯೋಗಿಕವಾಗಿ ‘ಶುಕ್ರಯಾನ-1’ ಎಂಬ ಹೆಸರಿಡಲಾಗಿದೆ.

ಚಂದ್ರಯಾನ-3ರ ಯಶಸ್ವಿ ಸಾಫ್ಟ್ಲ್ಯಾಂಡಿಂಗ್ ಮತ್ತು ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯ ಯಶಸ್ವಿ ಉಡ್ಡಯನದ ಬಳಿಕ, ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಸೋಮನಾಥ್ ತೆರೆದಿಟ್ಟಿದ್ದಾರೆ.

ಇಂಡಿಯನ್ ನ್ಯಾಶನಲ್ ಸಯನ್ಸ್ ಅಕಾಡೆಮಿ (ಐಎನ್ಎಸ್ಎ)ಯಲ್ಲಿ ಭಾಷಣ ಮಾಡಿದ ಸೋಮನಾಥ್, ಶುಕ್ರ ಗ್ರಹದ ಅಧ್ಯಯನಕ್ಕಾಗಿ ಒಂದು ಯೋಜನೆ, ಬಾಹ್ಯಾಕಾಶದ ಹವಾಮಾನ ಮತ್ತು ಭೂಮಿಯ ಮೇಲೆ ಅದರ ಪರಿಣಾಮವನ್ನು ವಿಶ್ಲೇಷಿಸಲು ಎರಡು ಉಪಗ್ರಹಗಳ ಉಡಾವಣೆ ಮತ್ತು ಮಂಗಳ ಗ್ರಹದಲ್ಲಿ ಬಾಹ್ಯಾಕಾಶ ನೌಕೆಯೊಂದನ್ನು ಇಳಿಸುವ ಯೋಜನೆಯನ್ನು ಇಸ್ರೊ ಹೊಂದಿದೆ ಎಂದು ಹೇಳಿದರು.

‘‘ಶುಕ್ರ ಅತ್ಯಂತ ಆಸಕ್ತಿದಾಯಕ ಗ್ರಹವಾಗಿದೆ. ಅದು ವಾತಾವರಣವನ್ನೂ ಹೊಂದಿದೆ. ಅದರ ವಾತಾವರಣವು ಎಷ್ಟು ದಪ್ಪವಾಗಿದೆಯೆಂದರೆ ಗ್ರಹದ ಮೇಲ್ಮೈವರೆಗೆ ಹೋಗಲು ಸಾಧ್ಯವಾಗುವುದಿಲ್ಲ’’ ಎಂದು ಅವರು ನುಡಿದರು.

‘‘ಭಾರತದ ಶುಕ್ರ ಯೋಜನೆಯು ಗ್ರಹದ ಭವಿಷ್ಯದ ಬಗ್ಗೆ ಕಲ್ಪನೆಯೊಂದನ್ನು ಹೊಂದಲು ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯಕ್ಕೆ ನೆರವು ನೀಡುತ್ತದೆ. ನೂರಾರು ಕೋಟಿ ವರ್ಷಗಳ ಹಿಂದೆ ಭೂಮಿಯೂ ವಾಸಯೋಗ್ಯವಾಗಿರಲಿಲ್ಲ’’ ಎಂದು ಸೋಮನಾಥ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News