ಜೈಪುರ | ಚಿಕಿತ್ಸೆಗೆ ದಾಖಲಾಗಿದ್ದ ಕ್ಯಾನ್ಸರ್ ಪೀಡಿತ ಬಾಲಕನಿಗೆ ಇಲಿ ಕಚ್ಚಿ ಸಾವು; ಆರೋಪ
ಜೈಪುರ: ರಕ್ತ ಕ್ಯಾನ್ಸರ್ ಹಾಗೂ ಕಡಿಮೆ ಪ್ರಮಾಣದ ಪ್ಲೇಟ್‌ಲೆಟ್‌ನಿಂದ ಬಳಲುತ್ತಿದ್ದ 10 ವರ್ಷದ ಬಾಲಕನೊಬ್ಬನ ಕಾಲಿನ ಉಗುರುಗಳನ್ನು ಎರಡು ದಿನಗಳ ಹಿಂದೆ ಇಲಿ ಕಡಿದಿದ್ದರಿಂದ ಬಾಲಕ ಸರಕಾರಿ ಕ್ಯಾನ್ಸರ್ ಸಂಸ್ಥೆಯಲ್ಲಿ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಆದರೆ, ಮಾಧ್ಯಮವೊಂದರಲ್ಲಿ ಪ್ರಕಟವಾಗಿರುವ ಈ ಸುದ್ದಿಯನ್ನು ಅಲ್ಲಗಳೆದಿರುವ ಆಸ್ಪತ್ರೆಯ ಅಧೀಕ್ಷಕ ಡಾ. ಸಂದೀಪ್ ಜಸುಲ, ಸೆಪ್ಟಿಸೆಮಿಕ್ ಆಘಾತ ಹಾಗೂ ತೀವ್ರ ಸೋಂಕಿನ ಕಾರಣಕ್ಕೆ ಬಾಲಕ ಮೃತಪಟ್ಟಿದ್ದಾನೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಬಾಲಕನು ಜ್ವರ ಮತ್ತು ನ್ಯುಮೋನಿಯಾದಿಂದಲೂ ಬಳಲುತ್ತಿದ್ದ ಎಂದು ಹೇಳಲಾಗಿದೆ.
ಈ ಆರೋಪದ ಸಂಬಂಧ ತ್ರಿಸದಸ್ಯರ ತನಿಖಾ ಸಮಿತಿಯನ್ನು ರಚಿಸಿರುವ ರಾಜ್ಯ ಸರಕಾರ, ಇನ್ನು ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಆಸ್ಪತ್ರೆಗೆ ಸೂಚಿಸಿದೆ. ಇದಲ್ಲದೆ, ಸರಕಾರಿ ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಿಂದ ರಾಜ್ಯ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಶ್ ಕುಮಾರ್ ಕೂಡಾ ವರದಿ ಕೋರಿದ್ದಾರೆ.
ಕ್ಯಾನ್ಸರ್ ಸಂಸ್ಥೆಯು ನಗರದ ಪ್ರತಾಪ್ ನಗರ ಪ್ರದೇಶದಲ್ಲಿರುವ ಎಸ್‌ಎಂಎಸ್ ಆಸ್ಪತ್ರೆಯ ಅಧೀನ ಸಂಸ್ಥೆಯಾಗಿದೆ.
ಶುಕ್ರವಾರ ಸ್ಥಳೀಯ ದಿನಪತ್ರಿಕೆಯೊಂದು ಇಲಿ ಕಡಿತದ ಕುರಿತು ವರದಿ ಮಾಡಿತ್ತು. "ಬುಧವಾರ ತಡ ರಾತ್ರಿ ನಾವು ಬಾಲಕನನ್ನು ಪರೀಕ್ಷಿಸಲು ತೆರಳಿದಾಗ, ಆತ ಅಳುತ್ತಿದ್ದದ್ದು ಕೇಳಿಸಿತು. ಆತನ ಬಳಿಗೆ ಧಾವಿಸಿದಾಗ, ಆತನ ಕಾಲಿನಲ್ಲಿ ರಕ್ತಸ್ರಾವವಾಗುತ್ತಿದ್ದದ್ದು ಹಾಗೂ ಕಂಬಳಿ ಅಡಿಯಿಂದ ಇಲಿ ಓಡಿ ಹೋಗಿದ್ದು ಕಂಡು ಬಂದಿತು" ಎಂದು ಮೃತ ಬಾಲಕನ ಸಂಬಂಧಿಕರು ಆ ವರದಿಯಲ್ಲಿ ಆರೋಪಿಸಿದ್ದರು.
ಈ ಸಂಬಂಧ ಸರಕಾರ ರಚಿಸಿರುವ ತನಿಖಾ ಸಮಿತಿಯಲ್ಲಿ ರಾಜಸ್ಥಾನ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಸ್ಪತ್ರೆ ಆಡಳಿತ ವಿಭಾಗದ ಹೆಚ್ಚುವರಿ ನಿರ್ದೇಶಕ ಮುಕೇಶ್ ಕುಮಾರ್, ಶೈಕ್ಷಣಿಕ ವಿಭಾಗದ ಉಪ ನಿರ್ದೇಶಕ ರಾಕೇಶ್ ಕರ್ಣನಿ ಹಾಗೂ ಆಸ್ಪತ್ರೆ ಆಡಳಿತ ವಿಭಾಗದ ಉಪ ನಿರ್ದೇಶಕಿ ಡಾ. ವಂದನಾ ಶರ್ಮ ಇದ್ದಾರೆ. ಈ ಇಬ್ಬರೂ ಕೂಡಾ ರಾಜಸ್ಥಾನ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾಗಿದ್ದಾರೆ.