ಜಮ್ಮು-ಕಾಶ್ಮೀರದ ರಾಜ್ಯದ ಸ್ಥಾನಮಾನ; ಎಪ್ರಿಲ್ 22ರಿಂದ ಕಾಂಗ್ರೆಸ್‌ನಿಂದ ಅಭಿಯಾನ

ಸಾಂದರ್ಭಿಕ ಚಿತ್ರ | PC : PTI
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರದ ರಾಜ್ಯದ ಸ್ಥಾನಮಾನ ಮರು ಸ್ಥಾಪನೆ ಆಗ್ರಹಿಸಿ ಒಂದೂವರೆ ತಿಂಗಳ ಅಭಿಯಾನ ಹಾಗೂ ‘ಸಂವಿಧಾನ ರಕ್ಷಿಸಿ’ ಚಳುವಳಿಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಪ್ರಿಲ್ 22ರಿಂದ ಆರಂಭಿಸಲಿದೆ.
ಜಮ್ಮು ಹಾಗೂ ಕಾಶ್ಮೀರದ ಪರಿವೀಕ್ಷಕರಾಗಿ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹಾಗೂ ನೂತನ ಉಸ್ತುವಾರಿಯಾಗಿ ಸೈಯದ್ ನಸೀರ್ ಹುಸೈನ್ ಅವರು ನೇಮಕರಾದ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭವಾಗಲಿದೆ.
ಈ ನೂತನ ನಿಯೋಜನೆಯೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ತನ್ನ ಬೆಂಬಲವನ್ನು ಪುನರುಜ್ಜೀವನಗೊಳಿಸಲು ಕಾಂಗ್ರೆಸ್ ಪ್ರಯತ್ನಿಸಲಿದೆ.
ಕಾಂಗ್ರೆಸ್ ತ್ಯಜಿಸಿ 2002ರಲ್ಲಿ ಗುಲಾಂ ನಬಿ ಆಝಾದ್ ಅವರ ಡೆಮಾಕ್ರೆಟಿಕ್ ಪ್ರೋಗ್ರೆಸಿವ್ ಅಝಾದ್ ಪಕ್ಷ ಸೇರಿದ ತನ್ನ ಹಿಂದಿನ ಬೆಂಬಲಿಗರನ್ನು ಕರೆ ತರುವ ಉದ್ದೇಶವನ್ನು ಪಕ್ಷ ಹೊಂದಿದೆ.
ಪಕ್ಷದ ಕೇಂದ್ರ ನಾಯಕತ್ವದ ಸೂಚನೆ ಹಿನ್ನೆಲೆಯಲ್ಲಿ ಜಮ್ಮು ಹಾಗೂ ಕಾಶ್ಮೀರದ ರಾಜ್ಯದ ಸ್ಥಾನಮಾನದ ಕುರಿತು ಹೊಸ ಅಭಿಯಾನ ಆರಂಭಿಸುತ್ತಿದೆ.
ರಾಜ್ಯದ ಸ್ಥಾನಮಾನ ಕುರಿತ ಬಿಜೆಪಿಯ ವಂಚನೆ ಹಾಗೂ ಚುನಾಯಿತ ಸರಕಾರವನ್ನು ಸಬಲೀಕರಿಸುವಲ್ಲಿ ಅದರ ವಿಫಲತೆಯ ಕುರಿತು ಅಭಿಯಾನ ಗಮನ ಸೆಳೆಯಲಿದೆ.
ಜಮ್ಮುವಿನ ಎಲ್ಲಾ ಜಿಲ್ಲೆಗಳು ಹಾಗೂ ಬ್ಲಾಕ್‌ಗಳ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯೊಂದಿಗೆ ಎಪ್ರಿಲ್ 22ರಂದು ಅಭಿಯಾನ ಆರಂಭವಾಗಲಿದೆ. ಇದನ್ನು ಅನುಸರಿಸಿ ಜಮ್ಮುವಿನಾದ್ಯಂತ ಎಪ್ರಿಲ್ 29ರಂದು ಪ್ರತಿಭಟನಾ ರ‍್ಯಾಲಿ ಆರಂಭವಾಗಲಿದೆ. ಈ ರ‍್ಯಾಲಿ ಸಂದರ್ಭ ಸಂವಿಧಾನದ ಮೇಲಿನ ದಾಳಿಯ ಕುರಿತು ಪಕ್ಷ ಗಮನ ಸೆಳೆಯಲಿದೆ.
ಈ ಪ್ರತಿಭಟನಾ ರ‍್ಯಾಲಿ ನಿರುದ್ಯೋಗ, ಹಣದುಬ್ಬರ, ಅತ್ಯಧಿಕ ತೆರಿಗೆ ಹಾಗೂ ವಿಭಜನೀಯ ಕೋಮು ರಾಜಕಾರಣವನ್ನು ನಿರ್ವಹಿಸುವಲ್ಲಿ ಬಿಜೆಪಿಯ ವಿಫಲತೆಯನ್ನು ಕೇಂದ್ರೀಕರಿಸಿ ನಡೆಯಲಿದೆ.